ಜಿ.ಪಂ-ತಾ.ಪಂ ಚುನಾವಣೆಗೆ ಮೂರು ತಿಂಗಳಲ್ಲಿ ಅಧಿಸೂಚನೆ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಹುಬ್ಬಳ್ಳಿ : ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಎರಡು-ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ, ವಷ್ಯಾಂತಕ್ಕೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಹೈಕೋರ್ಟ್‍ಗೂ ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ಚುನಾವಣೆ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಆರೆಸ್ಸೆಸ್ ಸಮಾಜದಲ್ಲಿ ವಿಷ ಬಿತ್ತುವ ಕೆಲಸ ಮಾಡುತ್ತಿದೆ :
ಮುಸ್ಲಿಮ್ ಸಮುದಾಯದವರು ಎಂಬ ಕಾರಣಕ್ಕೆ ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡಲು ಶಾಲೆಯ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿದ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ಸಮಾಜದಲ್ಲಿ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಶಾಲೆಯ ಮುಖ್ಯೋಪಾಧ್ಯಾರನ್ನು ವರ್ಗಾವಣೆ ಮಾಡಲು ಕುಡಿಯುವ ನೀರಿಗೆ ವಿಷ ಬೆರೆಸುವವರನ್ನು ಮನುಷ್ಯರು ಎಂದು ಕರೆಯಬೇಕೇ ಎಂದು ಕಿಡಿಗಾರಿದರು.
ಶ್ರೀರಾಮ ಸೇನೆಯವರು ವಿಷ ಬೆರೆಸಿದ್ದು ಎಂದು ಎಲ್ಲರಿಗೂ ಗೊತ್ತಾಗಿದೆ. ಬಿಜೆಪಿಯವರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಸಮಾಜದಲ್ಲಿ ಕೋಮು ವಿಷಬೀಜ ಬಿತ್ತಿರುವುದರ ಪರಿಣಾಮವೇ ಇಂತಹ ಘಟನೆಗಳು ನಡೆಯುತ್ತಿರುವುದು. ಮುಗ್ಧ ಮಕ್ಕಳ ಬಲಿ ಪಡೆಯಲು ಹೊರಟವರು ಮನುಷ್ಯರೇ? ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಅರವಿಂದ ಬೆಲ್ಲದ್ ಇವರೆಲ್ಲ ಎಲ್ಲಿದ್ದಾರೆ ಈಗ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚೀನಾದವರು 50-60 ಕಿ.ಮೀ ನಮ್ಮ ದೇಶದ ಗಡಿ ಒಳಗಡೆ ಬಂದಿದ್ದಾರೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದರೇ ಹೇಳಿಕೆ ನೀಡಿದ್ದಾರೆ. ಗಡಿಭಾಗದ ಹಳ್ಳಿ ಜನ ಕೂಡ ಅದನ್ನು ಹೇಳುತ್ತಿದ್ದಾರೆ. ಬಿಜೆಪಿಯವರಿಂದ ನಾವು ದೇಶ ಭಕ್ತಿಯ ಪ್ರಮಾಣಪತ್ರ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಜಾತಿ ನಿಂದನೆ ಮಾಡುವ ಹಕ್ಕು ಸಂವಿಧಾನ ಯಾರಿಗೂ ಕೊಟ್ಟಿಲ್ಲ. ಅದು ಸರಕಾರಿ ನೌಕರರು ಆಗಿರಲಿ, ಬೇರೆ ಯಾರೇ ಆಗಿರಲಿ, ಅಂತಹವರ ವಿರುದ್ಧ ಕ್ರಮ ಖಚಿತ ಎಂದರು.