ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ? : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಆ.13: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ನಿಮಯ ಮೀರಿ ಶೇ.4ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ನಿಮಯ ಮೀರಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಶೇ.4 ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಗೊತ್ತಾಗಿದೆ. ಹಾಗಾದರೆ ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ? ಎಂದು ಕೇಳಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಚುನಾವಣಾ ಆಯೋಗದವರು ಈ ಅಕ್ರಮವನ್ನು ತನಿಖೆ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದಾರೆ. ಅಕ್ರಮಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿಲ್ಲ. ಆಯೋಗವು ಸಂವಿಧಾನಿಕವಾಗಿ ವರ್ತನೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಮತದಾರನನ್ನು ಹೇಗೆ ಪಟ್ಟಿಗೆ ಸೇರಿಸಬೇಕು, ಪಟ್ಟಿಯಿಂದ ಕೈ ಬಿಡಬೇಕು ಎನ್ನುವ ನಿಯಮಗಳನ್ನೆ ಪಾಲನೆ ಮಾಡಿಲ್ಲ. ದಾರಿ ತಪ್ಪಿಸಲು ಆಯೋಗವು ಕೆಲಸ ಮಾಡುತ್ತಿದೆ. ಇದರಿಂದ ಆಯೋಗದ ಮೇಲೆ ಸಂಶಯ ಉಂಟಾಗುತ್ತಿದೆ ಎಂದು ಅವರು ಹೇಳಿದರು.