×
Ad

ರಾಷ್ಟ್ರೀಯ ಸರಾಸರಿಯನ್ನು ಹಿಂದಿಕ್ಕಿ ಸತತ 2ನೇ ವರ್ಷವೂ ಶೇ.12 ಬೆಳವಣಿಗೆ ದರ ದಾಖಲಿಸಿದ ಕರ್ನಾಟಕ

Update: 2026-03-07 16:59 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದ ಆರ್ಥಿಕತೆಯು ರಾಷ್ಟ್ರೀಯ ಸರಾಸರಿಗಿಂತ ವೇಗವಾಗಿ ಬೆಳೆದಿದ್ದು, ಶೇ.12.9ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ. ಶುಕ್ರವಾರ ರಾಜ್ಯದ ಬಜೆಟ್ ಸಂದರ್ಭದಲ್ಲಿ ಮಂಡಿಸಲಾದ ಮಧ್ಯಮಾವಧಿ ಹಣಕಾಸು ಯೋಜನೆ ವರದಿಯ ಪ್ರಕಾರ ರಾಷ್ಟ್ರೀಯ ಜಿಡಿಪಿ ಶೇ.8ರಷ್ಟು ಬೆಳವಣಿಗೆಯನ್ನು ಕಂಡಿದೆ.

ಪ್ರಸ್ತುತ ಬೆಲೆಗಳಲ್ಲಿ ರಾಜ್ಯ ಜಿಡಿಪಿಯು 2024-25ರ 29,06,063 ಕೋಟಿ ರೂ.ಗಳಿಂದ 2025-26ರಲ್ಲಿ 32,81,065 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಹಿಂದಿನ ವರ್ಷದ ಶೇ.12ಕ್ಕೆ ಹೋಲಿಸಿದರೆ ಶೇ.12.9ರಷ್ಟು ಬೆಳವಣಿಗೆಯಾಗಿದೆ. ಈ ಬೆಳವಣಿಗೆ ದರವು ರಾಷ್ಟ್ರೀಯ ಜಿಡಿಪಿ ಬೆಳವಣಿಗೆ ದರ ಶೇ.8ಕ್ಕಿಂತ ಅಧಿಕವಾಗಿದ್ದು,ಇದು ರಾಜ್ಯದ ಸುಭದ್ರ ಆರ್ಥಿಕ ಸ್ಥಿತಿಯನ್ನು ಮತ್ತು ಆರ್ಥಿಕ ವಿಸ್ತರಣೆಯನ್ನು ಹೆಚ್ಚಿಸಲು ಸುಸ್ಥಿರ ನೀತಿ ಪ್ರಯತ್ನಗಳನ್ನು ಸೂಚಿಸುತ್ತದೆ ಎಂದು ವರದಿಯು ಹೇಳಿದೆ.

ವರದಿಯ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ 6.57 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ಸು ಸೇರಿದಂತೆ ಹಲವಾರು ಅಂಶಗಳು ಬೆಳವಣಿಗೆಗೆ ಕಾರಣವಾಗಿವೆ.

ಕಳೆದೊಂದು ದಶಕದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹಣಕಾಸು ಬಿಡುಗಡೆ ಕಡಿಮೆಯಾಗುತ್ತಲೇ ಬಂದಿರುವುದನ್ನು ವರದಿಯು ಎತ್ತಿ ತೋರಿಸಿದೆ.

2017-18ರಲ್ಲಿ ಒಟ್ಟು ಸ್ವೀಕೃತಿಗಳಲ್ಲಿ ಕೇಂದ್ರದಿಂದ ವರ್ಗಾವಣೆಗಳ ಪಾಲು ಸುಮಾರು ಶೇ.32.1ರಷ್ಟಿದ್ದರೆ ಇದು 2026-27ರ ವೇಳೆಗೆ ಶೇ.25.1ಕ್ಕೆ ತಗ್ಗುವ ಅಂದಾಜಿದೆ. ಇದೇ ಅವಧಿಯಲ್ಲಿ ರಾಜ್ಯದ ಸ್ವಂತ ಕಂದಾಯ ಸ್ವೀಕೃತಿಗಳು ಶೇ.67.9ರಿಂದ ಶೇ.74.9ಕ್ಕೆ ಏರಿಕೆಯಾಗಿವೆ . ಇದಕ್ಕೆ ವಿರುದ್ಧವಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯಗಳು ಕೇಂದ್ರದ ವರ್ಗಾವಣೆಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಅವುಗಳ ಒಟ್ಟು ಸ್ವೀಕೃತಿಗಳಲ್ಲಿ ಕೇಂದ್ರದ ವರ್ಗಾವಣೆಗಳ ಪಾಲು ಶೇ.43.4ರಷ್ಟಿದ್ದು,ಸ್ವಂತ ಕಂದಾಯ ಸ್ವೀಕೃತಿಗಳು ಶೇ.56.6ರಷ್ಟಿವೆ ಎಂದು ವರದಿಯು ತಿಳಿಸಿದೆ.

2025 ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ದರಗಳನ್ನು ಪರಿಷ್ಕರಿಸಿದ ಬಳಿಕ ರಾಜ್ಯ ಸರಕಾರದ ಜಿಎಸ್‌ಟಿ ಆದಾಯವೂ ಇಳಿಕೆಯಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News