×
Ad

ಸೈಬರ್ ಅಪರಾಧ ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್‌

ಸೈಬರ್ ಅಪರಾಧ ತನಿಖಾ ಶೃಂಗಸಭೆ ಉದ್ಘಾಟನೆ

Update: 2026-03-07 16:34 IST

ಬೆಂಗಳೂರು : ಕರ್ನಾಟಕವು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ಹೊಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 'CIDECODE' 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ಕೇವಲ ಒಂದು ರಾಜ್ಯವಲ್ಲ. ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರಿನತ್ತ ನೋಡಿದಾಗ, ನಾವೀನ್ಯತೆಯ ಭವಿಷ್ಯ ಕಾಣಿಸುತ್ತದೆ. ಉತ್ತಮ ಮತ್ತು ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ ಎಂದರು.

ಸೈಬರ್ ದಾಳಿಗಳನ್ನು ತನಿಖೆ ಮಾಡಲು ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನದೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರಕಾರವು ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ನಮ್ಮ ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು.

ನಮ್ಮ ಸರಕಾರವು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತಾ ಅನುಸರಣೆ ಮತ್ತು ಅಪಾಯ ನಿರ್ವಹಣೆಯಂತಹ ವಿವಿಧ ವಲಯಗಳಲ್ಲಿ ಪರಿಣಿತಿ ಹೊಂದಿರುವ ವೈವಿಧ್ಯಮಯ ಕಂಪನಿಗಳೊಂದಿಗೆ, ಸೈಬರ್ ಭದ್ರತಾ ನವೋದ್ಯಮಗಳ ಪರಿಸರ ವ್ಯವಸ್ಥೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ‌ ಎಂದರು.

ನಾಗರಿಕರಿಗೆ ಹೆಚ್ಚಿನ ಡಿಜಿಟಲ್ ಸುರಕ್ಷತೆಯನ್ನು ನೀಡಲು ಖಾಸಗಿ ವಲಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರವಾಗಿ ಕೈಜೋಡಿಸಿ ಉಪಕ್ರಮಗಳನ್ನು ಕೈಗೊಳ್ಳುವುದು ಸಹಕಾರಿ ಮತ್ತು ಉತ್ತಮ ಪ್ರಯತ್ನವಾಗಿದೆ. ವೇಗವಾಗಿ ಬದಲಾಗುತ್ತಿರುವ ಸೈಬರ್ ಬೆದರಿಕೆಯ ವ್ಯಾಪ್ತಿಯನ್ನು ಪರಿಹರಿಸಲು ಅನುಭವ ಮತ್ತು ಪರಿಣಿತಿಯ ಇಂತಹ ಸಂವಾದಗಳು ಸಹಕಾರಿಯಾಗಲಿದೆ. ಡಾರ್ಕ್‌ವೆಬ್ ಚಟುವಟಿಕೆಗಳು, ಕ್ರಿಪ್ಟೋಕರೆನ್ಸಿ ಟ್ರ್ಯಾಕಿಂಗ್, ಹಣಕಾಸು ವಂಚನೆ ತಡೆಗಟ್ಟುವಿಕೆ, ಡಿಜಿಟಲ್ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಬಲಪಡಿಸಲು ಹೆಚ್ಚು ಪ್ರಸ್ತುತ ಮತ್ತು ಸಮಯೋಚಿತವಾಗಿವೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಸಿಸಿಐಟಿಆರ್ ಸ್ಥಾಪನೆಯಿಂದ ಸೈಬರ್ ಅಪರಾಧ ತನಿಖೆಯನ್ನು ಬಲಪಡಿಸುವುದು, ಸಂಶೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮತ್ತು ನಮ್ಮ ಪೊಲೀಸ್ ಅಧಿಕಾರಿಗಳನ್ನು ಸುಧಾರಿತ ತಾಂತ್ರಿಕ ಕೌಶಲ್ಯಗಳಿಂದ ಸಜ್ಜುಗೊಳಿಸಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ.‌ ಈ ಕೇಂದ್ರದಿಂದ ಹೊರಹೊಮ್ಮುತ್ತಿರುವ ಸಂಶೋಧನಾ ಪ್ರಕಟಣೆಗಳು ಮತ್ತು ಸಾಮರ್ಥ್ಯವರ್ಧನಾ ಉಪಕ್ರಮಗಳು ಸೈಬರ್ ಪೊಲೀಸ್ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.

ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವು ರಾಜ್ಯದ ಪೊಲೀಸ್ ಅಧಿಕಾರಿ‌ ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳ ಸದಸ್ಯರು ಸೇರಿದಂತೆ 62 ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ‌ ನೀಡಿದೆ ಎಂದರು

ಸೈಬರ್ ಅಪರಾಧವು ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿಯಿಲ್ಲದ, ತಂತ್ರಜ್ಞಾನ ಆಧಾರಿತ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಅಪರಾಧ. ಹಣಕಾಸಿನ ವಂಚನೆಗಳು ಮತ್ತು ಕ್ರಿಪ್ಟೋಕರೆನ್ಸಿ, ಡಾರ್ಕ್‌ವೆಬ್ ಆಧಾರಿತ ಮಾದಕವಸ್ತು ಜಾಲಗಳು ಮತ್ತು ಡೇಟಾ ಉಲ್ಲಂಘನೆಯವರೆಗೆ, ಬೆದರಿಕೆಗಳ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ಈ ಸವಾಲುಗಳನ್ನು ತಾಂತ್ರಿಕ ಸಾಮರ್ಥ್ಯದಿಂದ ಮಾತ್ರವಲ್ಲದೆ ಕಾನೂನುಗಳನ್ನು ಬಲಪಡಿಸುವ ಮೂಲಕ ಸಂಘಟನಾತ್ಮಕವಾಗಿ ಎದುರಿಸಬೇಕಿದೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಸೆ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News