×
Ad

ದುರಹಂಕಾರ ಬಿಟ್ಟು ಕಾನೂನನ್ನು ಪಾಲಿಸಿ: RSSಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

Update: 2026-06-16 14:49 IST

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ವನ್ನು ನೋಂದಾಯಿಸುವ ಅಗತ್ಯವಿಲ್ಲ ಎಂಬ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ‘ದುರಹಂಕಾರವನ್ನು ತ್ಯಜಿಸಿ, ಕಾನೂನನ್ನು ಪಾಲಿಸಿ’ ಎಂದು ಹೇಳಿದ್ದಾರೆ.

RSSನ ಕಾನೂನು ಸ್ಥಾನಮಾನ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಜೂನ್ 13ರಂದು ಸಂಘದ ನಾಯಕತ್ವಕ್ಕೆ ಪತ್ರ ಬರೆದಿರುವುದಾಗಿ ಖರ್ಗೆ ತಿಳಿಸಿದ್ದಾರೆ. ಸಂಘಟನೆಯ ಕಾನೂನು ಚೌಕಟ್ಟು ಹಾಗೂ ಸಾರ್ವಜನಿಕ ಹೊಣೆಗಾರಿಕೆ ಕುರಿತು ಸ್ಪಷ್ಟನೆ ನೀಡುವಂತೆ ಅವರು ಕೋರಿದ್ದರು.

ಈ ನಡುವೆ, ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, RSS ಯಾವುದೇ ಸರ್ಕಾರಿ ಅನುದಾನ ಪಡೆಯುವುದಿಲ್ಲ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅದಕ್ಕೆ ನೋಂದಣಿ ಅಗತ್ಯವಿಲ್ಲ ಎಂದು ಹೇಳಿದ್ದರು. ‘ಹಿಂದೂ ಧರ್ಮವೇ ನೋಂದಾಯಿತವಾಗಿಲ್ಲ. ಅನೇಕ ಸಂಗತಿಗಳು ನೋಂದಾಯಿತವಾಗಿಲ್ಲ’ ಎಂದೂ ಅವರು ಪ್ರತಿಪಾದಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊ ತಮ್ಮ ಪತ್ರಕ್ಕೆ ಉತ್ತರ ಎಂದು ಬಿಂಬಿಸಲಾಗುತ್ತಿದೆ. ಆದರೆ ಭಾಗವತ್ ಅವರ ಹೇಳಿಕೆ ಜೂನ್ 13 ಅಥವಾ 14ರಂದು ನೀಡಲಾಗಿದ್ದು, ತಾವು ಪತ್ರವನ್ನು ಜೂನ್ 15ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಅದನ್ನು ತಮ್ಮ ಪತ್ರಕ್ಕೆ ಪ್ರತಿಕ್ರಿಯೆ ಎಂದು ಹೇಳುವುದು ಸರಿಯಲ್ಲ ಎಂದು ಖರ್ಗೆ ಹೇಳಿದ್ದಾರೆ.

ಭಾಗವತ್ ಅವರ ವಾದವನ್ನು ತಳ್ಳಿಹಾಕಿರುವ ಖರ್ಗೆ, ‘ಧರ್ಮವನ್ನು ನೋಂದಾಯಿಸಲು ಸಾಧ್ಯವಿಲ್ಲ. ಆದ್ದರಿಂದ RSS ಅನ್ನು ನೋಂದಾಯಿಸುವ ಅಗತ್ಯವಿಲ್ಲ ಎಂಬ ವಾದ ಸರಿಯಲ್ಲ. ಅದು ಅಸಂಬದ್ಧ. ಕೇವಲ 100 ವರ್ಷಗಳ ಇತಿಹಾಸ ಹೊಂದಿರುವ RSS ಅನ್ನು ಧರ್ಮದೊಂದಿಗೆ ಹೋಲಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.

‘RSS ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುವ ಹಕ್ಕು ಹೊಂದಿದೆ. ಆದರೆ ಅದೇ ವೇಳೆ ದೇಶದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದ್ದರೂ ಯಾವುದೇ ಸಾರ್ವಜನಿಕ ಹೊಣೆಗಾರಿಕೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿ ಕೂಡ RSS ಅನ್ನು ತನ್ನ ಸೈದ್ಧಾಂತಿಕ ಪೋಷಕ ಸಂಘಟನೆ ಎಂದು ಒಪ್ಪಿಕೊಂಡಿದೆ’ ಎಂದಿದ್ದಾರೆ.

ದೇಶ ಮತ್ತು ವಿದೇಶಗಳಲ್ಲಿ 2,500ಕ್ಕೂ ಹೆಚ್ಚು ಅಂಗಸಂಸ್ಥೆಗಳ ಮೂಲಕ RSS ಕಾರ್ಯನಿರ್ವಹಿಸುತ್ತಿದೆ. ದೇಣಿಗೆಗಳನ್ನು ಸ್ವೀಕರಿಸುತ್ತಿದ್ದು, ವಿವಿಧ ನಗರಗಳಲ್ಲಿ ದೊಡ್ಡ ಕಚೇರಿಗಳನ್ನು ಹೊಂದಿದೆ. RSS ಮುಖ್ಯಸ್ಥರಿಗೆ ಹಾಗೂ ಕೆಲ ಪದಾಧಿಕಾರಿಗಳಿಗೆ ತೆರಿಗೆದಾರರ ಹಣದಿಂದ ಭದ್ರತಾ ವ್ಯವಸ್ಥೆ ಒದಗಿಸಲಾಗುತ್ತಿದೆ. ಇಂತಹ ಸಂಸ್ಥೆ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಖರ್ಗೆ ಹೇಳಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ RSSಗೆ ಇಲ್ಲ ಎಂಬ ಭಾಗವತ್ ಅವರ ಹೇಳಿಕೆಯನ್ನು ‘ಕಳವಳಕಾರಿ’ ಎಂದು ಬಣ್ಣಿಸಿರುವ ಖರ್ಗೆ, ‘ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಕಾನೂನಿಗಿಂತ ಮೇಲಲ್ಲ. ದುರಹಂಕಾರವನ್ನು ಬಿಟ್ಟು ಕಾನೂನನ್ನು ಪಾಲಿಸಿ. ನಿಮ್ಮ ಪದಾಧಿಕಾರಿಗಳು ಅಥವಾ ಕಾನೂನು ಮುಖ್ಯಸ್ಥರು ಬಂದು ನನಗೆ ವಿವರಿಸಲಿ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Darshan T

contributor

Similar News