ರೈತರ ಬಡ್ಡಿ ರಹಿತ ಸಾಲ ಸೌಲಭ್ಯದ ದುರುಪಯೋಗಕ್ಕೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಒಬ್ಬ ರೈತನಿಗೂ ವಂಚನೆ ಆಗಲು ಬಿಡಬಾರದು. ಅದರಂತೆ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗ ಆಗದಂತೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕೃಷಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಕೃಷಿ ಮಾರುಕಟ್ಟೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರೈತರಿಗೆ ಅಗತ್ಯ ಮಾಹಿತಿ ಪೂರೈಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ಸನ್ನದ್ಧರಾಗಬೇಕು. ಜತೆಗೆ, ಕ್ರಿಮಿನಾಶಕ ಮತ್ತಿತರ ಔಷಧ ಸಿಂಪರಣೆ ಸಲಕರಣೆಗಳ ನೆರವನ್ನು ರೈತರಿಗೆ ಒದಗಿಸಬೇಕು. ಅದೇ ರೀತಿ, ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಂಡಗಳಿಗೆ ಬೇಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಿ. ಇದಕ್ಕೆ ಹಣಕಾಸಿನ ನೆರವು ಸಂಬಂಧ ಅಗತ್ಯ ಯೋಜನೆ ರೂಪಿಸಿ ಎಂದು ಅವರು ಹೇಳಿದರು.
ಇತರೆ ರಾಜ್ಯಗಳಲ್ಲಿರುವ ಮಾದರಿ ಯೋಜನೆ, ಮಾರ್ಗಗಳನ್ನು ಅಧ್ಯಯನ ಮಾಡಿ ರಾಜ್ಯದ ಕೃಷಿ ಸಂಸ್ಕೃತಿ ಮತ್ತು ಬೆಳೆ ಮಾದರಿಗಳಿಗೆ ಅನುಗುಣವಾಗಿ ಕಾರ್ಯರೂಪಕ್ಕೆ ತನ್ನಿ. ದ್ರೋಣ್, ಎಐ ಮತ್ತಿತರ ಆಧುನಿಕ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಪ್ರಕೃತಿ ವೈಪರೀತ್ಯಗಳಿಂದ ರೈತರ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಕ್ರಮ ವಹಿಸಿ.ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಿ. ಪ್ರಾಥಮಿಕ ಕೃಷಿ ಜತೆ ಸೆಕೆಂಡರಿ ಕೃಷಿ ಸೇರಿದಂತೆ ರೈತರ ಆದಾಯ ಹೆಚ್ಚಿಸಲು ಈಗಾಗಲೇ ಸೂಚಿಸಿರುವ ಕ್ರಮಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಕೃಷಿ ಇಲಾಖೆ ಅಧೀನದಲ್ಲಿರುವ ಐದು ನಿಗಮ ಮತ್ತು ಮಂಡಳಿಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ರೈತರಿಗೆ ನೀಡಬೇಕಾದ ಪೂರಕ ಮಾಹಿತಿಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕು. ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳು ಬಗ್ಗೆ ಪಟ್ಟಿ ನೀಡಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ಕೊಟ್ಟಿರುವ ಸವಲತ್ತುಗಳು ಎಷ್ಟು ಪ್ರಯೋಜನಕಾರಿಯಾಗಿವೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಬ್ಸಿಡಿ ನೀಡಿರುವ ಉದ್ದೇಶ ಜಾರಿ ಆಗುತ್ತಿದೆಯೇ ಎಂಬುದರ ಬಗ್ಗೆ ವರದಿ ನೀಡಬೇಕು ಎಂದ ಅವರು, ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳು ಎಷ್ಟರ ಮಟ್ಟಿಗೆ ಜಾರಿ ಆಗುತ್ತಿದೆ ಎನ್ನುವ ಬಗ್ಗೆ ವರದಿ ಸಲ್ಲಿಸಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೇರಿದ ಜಾಗಗಳು ಸುರಕ್ಷಿತವಾಗಿರಬೇಕು. ಇದಕ್ಕಾಗಿ ತಡೆಗೋಡೆ ಹಾಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಶಿವಕುಮಾರ್ ತಿಳಿಸಿದರು.
ಸಹಕಾರ ಇಲಾಖೆ ಅಡಿಯಲ್ಲಿ ಯಾವ ಸಂಸ್ಥೆಗಳಿಗೆ ಚುನಾವಣೆ ಆಗಬೇಕಿದೆಯೋ ಎಲ್ಲದಕ್ಕೂ ಚುನಾವಣೆ ನಡೆಸಬೇಕು ಎಂದೂ ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು. ಈ ವೇಳೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಇಲಾಖೆ ಶೆಟ್ಟಣ್ಣನವರ್, ಎಪಿಎಂಸಿ ನಿರ್ದೇಶಕ ಡಾ.ನಲ್ಲಕುಂಟೆ ವೆಂಕಟೇಶಯ್ಯ ಮತ್ತಿತರರು ಭಾಗವಹಿಸಿದ್ದರು.
1,068 ಕೋಟಿ ರೂ., ಮಾವು ಬೆಳೆ ನಾಶ:
ಈ ವರ್ಷ 1068 ಕೋಟಿ ಮಾವು ಬೆಳೆ ನಾಶ ಆಗಿದೆ. ಈ ಪೈಕಿ ಶೇ.25ರಷ್ಟು ಅಂದರೆ 229 ಕೋಟಿ ರೂ. ಪರಿಹಾರ ಕೊಡಬೇಕಿದೆ. ರಾಜ್ಯ ಸರಕಾರ 114 ಕೋಟಿ ರೂ., ಹಾಗೂ ಕೇಂದ್ರ ಸರಕಾರ 115 ಕೋಟಿ ರೂ., ನಷ್ಟ ಪರಿಹಾರ ಭರಿಸಬೇಕಿದೆ. ಈ ಸಂಬಂಧ ಕಾನೂನು ಪ್ರಕಾರ ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ಸಿಗುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
‘ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸುವ ಆತಂಕವೂ ಇದೆ. ಈ ನಿಟ್ಟಿನಲ್ಲಿ ತುರ್ತು ಕ್ರಮಗಳ ಪೂರ್ವಸಿದ್ಧತೆ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.