×
Ad

ಬಿಜೆಪಿಯಲ್ಲಿನ ಕಳಪೆ ಪ್ರಾಡಕ್ಟ್ ಗಳ ಮೌಲ್ಯ ಹೆಚ್ಚಿಸಲು ನಾನು ಬೇಕು: ಪ್ರತಾಪ್ ಸಿಂಹ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2025-07-09 21:10 IST

ಪ್ರಿಯಾಂಕ್‌ ಖರ್ಗೆ/ಪ್ರತಾಪ್ ಸಿಂಹ

ಬೆಂಗಳೂರು: ಬಿಜೆಪಿಯಲ್ಲಿನ ಕಳಪೆ ಪ್ರಾಡಕ್ಟ್ ಗಳು ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಲು ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಪ್ರತಾಪ್ ಸಿಂಹ ನನ್ನ ಪ್ರತಿಭೆ ನೋಡಿ ನನಗೆ ಮೋದಿ ಟಿಕೆಟ್ ನೀಡಿದರು ಎಂದು ಹೇಳಿಕೊಂಡಿದ್ದರು. ಹಾಗಾದರೆ, ಈ ಬಾರಿ ಚುನಾವಣೆಯಲ್ಲಿ ಯಾಕೆ ಟಿಕೆಟ್ ನೀಡಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತಾಪ್ ಸಿಂಹ ಹಾಕಿರುವ ಸವಾಲು ಸ್ವೀಕರಿಸಲು ನಾನು ಸಿದ್ಧ. ಅವರನ್ನು ಕರೆಸಿ ಚರ್ಚೆಗೆ ತಯಾರಾಗಿದ್ದೇನೆ. ಯಾವುದಾದರೂ ಉತ್ಪನ್ನಗಳು ಸರಿಯಾಗಿ ಮಾರಾಟವಾಗದಿದ್ದಾಗ ಅದರ ಪ್ರಚಾರಕ್ಕಾಗಿ ರಾಯಭಾರಿಗಳನ್ನು ನೇಮಕ ಮಾಡುತ್ತಾರೆ. ಅದೇ ರೀತಿ, ಬಿಜೆಪಿಯಲ್ಲಿ ಚಲಾವಣೆಯಲ್ಲಿ ಇಲ್ಲದ ಕಳಪೆ ಉತ್ಪನ್ನಗಳಿಗೆ ಮೌಲ್ಯ ಹೆಚ್ಚಿಸಿಕೊಳ್ಳಲು ನಾನು ಬೇಕಾಗಿದ್ದೇನೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

ಮೋದಿಯವರು ಮೈಸೂರಿನ ಲಲಿತ್ ಮಹಲ್ ನಲ್ಲಿ ನೀವು ಮಾತನಾಡಿದ ಆಡಿಯೋ ಏನಾದರೂ ಕೇಳಿದ್ರಾ? ಅಥವಾ ಸಂಸತ್ ಭವನದ ಒಳಗೆ ಹೊಗೆ ಬಾಂಬ್ ಎಸೆದವರಿಗೆ ತಾವು ಪಾಸ್ ಕೊಟಿದ್ದರಿಂದ ನಿಮ್ಮ ಮೊಬೈಲ್ ಜಪ್ತಿಯಾಗಿತ್ತಲ್ಲ, ಅದರಲ್ಲಿ ಏನಾದರೂ ನೋಡಿದ್ರಾ? ಅವರು ಪ್ರಶ್ನಿಸಿದರು.

ನಾನು ಬಿಜೆಪಿಯವರಿಗೆ ಕೇಳುವ ಯಾವ ಪ್ರಶ್ನೆಗಳಿಗೂ ಉತ್ತರ ಕೊಡುವುದಿಲ್ಲ. ವಿಷಯವನ್ನು ಬೇರೆ ಕಡೆ ತಿರುಗಿಸುತ್ತಾರೆ. ಆರೆಸ್ಸೆಸ್ ಕಚೇರಿಯ ಮೇಲೆ 52 ವರ್ಷ ದೇಶದ ಧ್ವಜ ಯಾಕೆ ಹಾರಿಸಲಿಲ್ಲ ಎಂದು ನಾನು ಪ್ರಶ್ನಿಸಿದರೆ, ಪ್ರಿಯಾಂಕ್ ಪಿಯುಸಿ ಓದಿರುವುದು ಎಂದು ಗೇಲಿ ಮಾಡುತ್ತಾರೆ. ಹೌದು ನಾನು ಪಿಯುಸಿ ಓದಿದ್ದೇನೆ. ನನಗೆ ಪಾಠ ಮಾಡಿದ ಶಿಕ್ಷಕರು, ನನ್ನ ಸಹಪಾಠಿಗಳನ್ನು ನಾನು ಈಗಲೂ ಬಲ್ಲೆ. ಆದರೆ, ಎಂಟೈರ್ ಪೊಲಿಟಿಕಲ್ ಸೈನ್ಸ್ ಓದಿರುವ ನರೇಂದ್ರ ಮೋದಿಯವರ ಸಹಪಾಠಿ, ಶಿಕ್ಷಕ ಯಾರಾದರೂ ಇದ್ದಾರಾ? ನೀವು ನೋಡಿದ್ದೀರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಪದೇ ಪದೇ ಖರ್ಗೆ ಹೆಸರನ್ನು ಉಲ್ಲೇಖ ಮಾಡುತ್ತಾರೆ. ಹೌದು ಖರ್ಗೆ ಎಂದು ಹೆಸರು ಹೇಳಿಕೊಳ್ಳೋಕೆ ನನಗೆ ಹೆಮ್ಮೆ ಇದೆ. ನಮ್ಮ ಅಪ್ಪನ ಹೆಸರು ಹೇಳೋಕೆ ನನಗೆ ಹೆಮ್ಮೆ ಇದೆ. ನಿಮ್ಮ ಅಪ್ಪನ ಹೆಸರು ಹೇಳಿಕೊಳ್ಳಲು ನಿಮಗೆ ಹೆಮ್ಮೆ ಇಲ್ಲದಿದ್ದರೆ ಅದಕ್ಕೆ ನಾನೇನು ಮಾಡಲಿ? ಅವರಪ್ಪ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ನಾನೇನು ಮಾಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ತಾತ ಮಿಲ್‍ನಲ್ಲಿ ಕೆಲಸ ಮಾಡಿ ನಮ್ಮ ತಂದೆಯನ್ನು ವಕೀಲರನ್ನಾಗಿ ಮಾಡಿದರು. ನಮ್ಮ ತಂದೆ ವಕಾಲತ್ತು ಮಾಡಿ ನಮ್ಮನ್ನು ಬೆಳೆಸಿದರು. ಜನರ ಆಶೀರ್ವಾದದಿಂದ ಇವತ್ತು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರದ್ದೂ ಡಬಲ್ ಡಿಗ್ರಿ. ನನಗೆ ನಮ್ಮ ತಂದೆ, ತಾಯಿ, ಜನರ ಆಶೀರ್ವಾದ ಇದೆ. ಆದುದರಿಂದಲೇ, ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿಯವರಿಗೆ ಡಿಎನ್‍ಎ ಟೆಸ್ಟ್ ಮಾಡೋಕೆ ಕ್ಯಾಂಪ್ ಸಿದ್ದಪಡಿಸುತ್ತೇನೆ. ನಮಗೆ ಕುಟುಂಬದ ಹಿನ್ನೆಲೆಯಿಂದಾಗಿ ಟಿಕೆಟ್ ಸಿಕ್ಕಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹಾಗಾದರೆ, ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ಹೇಗೆ ಸಿಕ್ಕಿತ್ತು? ಅವರು ಸಂಘ ಪರಿವಾರದ ಶಾಖೆಯಲ್ಲಿದ್ರಾ? ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ರಾ? ಈ ಬಗ್ಗೆ ಉತ್ತರ ಕೊಡಲಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಆ ಯುವ ಪ್ರತಿಭೆ ಯಾರು?:

ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ತೆರಳಿ ಅವಮಾನ ಅನುಭವಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ಆ ವಿಚಾರವನ್ನು ನೀವು ಅವರನ್ನೆ ಕೇಳಬೇಕು, ನನಗೆ ಗೊತ್ತಿಲ್ಲ. ಆ ಯುವ ಪ್ರತಿಭೆ ಯಾರು?’ ಎಂದು ಗೊತ್ತಾಗಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News