×
Ad

SIR | ಗೊಂದಲ ಸರಿಪಡಿಸದೆ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ?: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

"ಈಗ ಸೃಷ್ಟಿಯಾಗಿರುವ ಗೊಂದಲಗಳಿಗೆ ಯಾರು ಕಾರಣ?"

Update: 2026-07-04 20:09 IST

ಗೃಹ ಸಚಿವ ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಸಂದರ್ಭದಲ್ಲಿ ಉಲ್ಬಣಗೊಂಡಿರುವ ಗೊಂದಲಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದೇ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ನಿಷ್ಪಪಕ್ಷಪಾತವಾದ ಚುನಾವಣೆ ನಡೆಸುವುದು ಮತ್ತು ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವಿದೆ? ಅದನ್ನು ಸರಿಯಾಗಿ ಮಾಡದೇ ಇದ್ದ ಮೇಲೆ ಇನ್ನೇನು ಮಾಡುತ್ತಾರೆ? ಎಂದು ಹೇಳಿದರು.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅವರು ಅಧಿಕಾರದಲ್ಲಿರುವುದನ್ನು ಮರೆತಂತಿದೆ. ಎಲ್ಲವೂ ಅವರ ಕೈಯಲ್ಲೇ ಇದೆ. ಕೇಂದ್ರ ಚುನಾವಣಾ ಆಯೋಗದ ಉಸ್ತುವಾರಿಯಲ್ಲೇ ಎಸ್‍ಐಆರ್ ಮಾಡಲಿ, ಯಾರು ಬೇಡ ಎಂದಿದ್ದಾರೆ?. ಅಲ್ಲದೆ, ಈಗ ಸೃಷ್ಟಿಯಾಗಿರುವ ಗೊಂದಲಗಳಿಗೆ ಯಾರು ಕಾರಣ? ಕಾಂಗ್ರೆಸ್ ಪಕ್ಷವಂತೂ ಗೊಂದಲ ಮಾಡಿಲ್ಲ, ರಾಜ್ಯ ಸರಕಾರ ಎಸ್‍ಐಆರ್ ಗೆ ವಿರುದ್ಧವಿಲ್ಲ ಪಾರದರ್ಶಕವಾಗಿ ಎಸ್‍ಐಆರ್ ನಡೆಯಬೇಕೆಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.

ಎಸ್‍ಐಆರ್ ಗೆ ಚುನಾವಣಾ ಆಯೋಗದ ವೀಕ್ಷಕರು ಇರುತ್ತಾರೆ. ಲೋಪಗಳಿದ್ದರೆ ಆಯೋಗವೇ ಕ್ರಮ ಕೈಗೊಳ್ಳುತ್ತದೆ. ರಾಜ್ಯ ಸರಕಾರ ಸಮುದಾಯ ಭವನ ಅಥವಾ ಕಚೇರಿಗಳಲ್ಲಿ ಎಸ್‍ಐಆರ್ ಮಾಡಿ ಎಂದು ಹೇಳಲಿಲ್ಲ ಎಂದ ಅವರು, ಜನರಲ್ಲಿ ಎಸ್‍ಐಆರ್ ಬಗ್ಗೆ ಅನುಮಾನ, ಗೊಂದಲಗಳಿದ್ದರೆ ಅದಕ್ಕೆ ಯಾರು ಹೊಣೆ? ನಿಯಮಗಳನ್ನು ರೂಪಿಸುವುದು ಯಾರು? ರಾಜ್ಯ ಸರಕಾರಕ್ಕೆ ಏನಾದರೂ ಸಂಬಂಧವಿದೆಯೇ? ಎಂದು ಅವರು ಪ್ರಶ್ನಿಸಿದರು.

ಎಸ್‍ಐಆರ್‍ನಿಂದ ದಲಿತರಿಗೆ, ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಆತಂಕ ಇದೆ. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎಸ್‍ಐಆರ್ ಬಳಿಕ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡವರಿಗೆ ಮಾತ್ರ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ದೊರೆಯುತ್ತವೆ ಎಂದು ಹೇಳಲಾಗಿತ್ತು. ಹೀಗಾಗಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಇದನ್ನು ನಿವಾರಣೆ ಮಾಡುವುದು ಎಲ್ಲಾ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಪ್ರಿಯಾಂಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News