×
Ad

ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ?

Update: 2026-07-04 22:51 IST

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆ ಮುಂದಿನ ವಾರದಲ್ಲಿಯೇ ನಡೆಯಲಿದೆ ಎಂದು ತಿಳಿದು ಬಂದಿದೆ.

ಜು.14ರಿಂದ ಆಷಾಢ ಆರಂಭವಾಗಲಿದ್ದು, ಆಗಸ್ಟ್ 12ರ ವರೆಗೂ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಜು.12ರೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಎಸ್‍ಐಆರ್ ಪ್ರಕ್ರಿಯೆ ಸಂಬಂಧ ಚುನಾವಣಾ ಆಯೋಗ ಆ.5ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಿದೆ. ಅನಂತರ ಮಳೆಗಾಲದ ವಿಧಾನ ಮಂಡಲ ಅಧಿವೇಶನ ಸಮಾವೇಶಗೊಳ್ಳುವ ಸಾಧ್ಯತೆ ಇದೆ. ಅಧಿವೇಶನಕ್ಕೂ ಮುನ್ನವೇ ಪರಿಪೂರ್ಣ ಸಂಪುಟ ರಚನೆಯಾಗಬೇಕಿದೆ. ಆ.15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಬೇಕಿದೆ. ಅದಕ್ಕೂ ಮುನ್ನವೇ ಸಂಪುಟ ಪುನರ್ ರಚನೆಯಾಗುವ ಅನಿವಾರ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಆಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ನಿನ್ನೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಪಿ.ಎಂ.ಅಶೋಕ್ ಪಟ್ಟಣ್, ಎ.ಎಸ್. ಪೊನ್ನಣ್ಣ, ಕೆ.ಎನ್.ರಾಜಣ್ಣ, ಎಂ.ಆರ್.ಸೀತಾರಾಮ್ ಮತ್ತಿತರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಒಂದೆಡೆ ಮುಖಂಡರು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಆಕಾಂಕ್ಷಿಗಳು ಹಿರಿಯ ನಾಯಕರ ಬೆನ್ನಿಗೆ ಬಿದ್ದು ಅವಕಾಶಕ್ಕಾಗಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಹೈಕಮಾಂಡ್ ಸಮತಿ ನೀಡಿದರೆ ಜು.12ರ ರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಜು.10ರಂದು ಶುಕ್ರವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News