×
Ad

SIR ಅಕ್ರಮಗಳ ಬಗ್ಗೆ ದಾಖಲೆ ಸಮೇತ ರಾಜ್ಯ ಚುನಾವಣಾ ಆಯೋಗದ ಗಮನ ಸೆಳೆಯಲಿದ್ದೇವೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2026-07-04 18:47 IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಪ್ರಕ್ರಿಯೆ ಸಾಮೂಹಿಕ ನಕಲು ಎನ್ನುವಂತಿದ್ದು, ರಾಜಾರೋಷವಾಗಿ ನಡೆಯುತ್ತಿರುವ ಎಸ್‍ಐಆರ್ ಅಕ್ರಮಕ್ಕೆ ಬ್ರೇಕ್ ಹಾಕಬೇಕು. ಇಲ್ಲವಾದರೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್‍ಐಆರ್ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಬಿಜೆಪಿ-ಜೆಡಿಎಸ್ ಚುನಾವಣಾ ಆಯೋಗದ ಗಮನ ಸೆಳೆಯಲಿದ್ದೇವೆ. ಮಸೀದಿ, ಸಮುದಾಯ ಭವನ, ಸಾರ್ವಜನಿಕ ಪ್ರದೇಶಗಳಲ್ಲಿ ಎಸ್‍ಐಆರ್ ಪ್ರಕ್ರಿಯೆ ಸಾಮೂಹಿಕವಾಗಿ ನಡೆಯುತ್ತಿದೆ. ಇದೊಂದು ರೀತಿ ಸಾಮೂಹಿಕ ನಕಲು ನಡೆದಂತಹ ರೀತಿಯಲ್ಲಿದೆ ಎಂದು ಆರೋಪಿಸಿದರು.

ಎಲ್ಲೆಡೆಯೂ ಸಾಮೂಹಿಕವಾಗಿ ಕರಪತ್ರ ಹಂಚಿದಂತೆ ಎಸ್‍ಐಆರ್ ಫಾರ್ಮ್‍ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಹಂಚುತ್ತಿದ್ದಾರೆ. ತಕರಾರು ಮಾಡಿದರೂ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ. ‘ದಿಲ್ಲಿಗೆ ಬೇಕಾದರೂ ಹೇಳಿ’ರೆಂದು ದಿಟ್ಟತನ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಇದೆಲ್ಲದರ ಬಗ್ಗೆಯೂ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಹುಬ್ಬಳ್ಳಿ-ಧಾರವಾಡದ ವಾರ್ಡ್ ಸಂಖ್ಯೆ 66, ಬೂತ್ ನಂ.55, ಮುಲ್ಲಾನ ಓಣಿ ಹೀಗೆ ಅನೇಕ ಕಡೆ ಎಸ್‍ಐಆರ್ ಅರ್ಜಿಗಳ ಸಾಮೂಹಿಕ ವಿತರಣೆ ನಡೆದಿದೆ. ಇನ್ನು ಸವಣೂರು ಬೂತ್ ನಂ.184, 185, 186ರಲ್ಲಿ, ಬಂಕಾಪುರ ಮಸೀದಿಗಳಲ್ಲಿ ಪ್ರಕ್ರಿಯೆ ನಡೆದಿದೆ. ವಾಟ್ಸ್ ಅಪ್‍ಗಳಲ್ಲಿ ರಾಜಾರೋಷವಾಗಿ ಫೋಟೊ ಸಮೇತ ಹಾಕಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಸಾಕ್ಷ್ಯ ಸಮೇತ ಚುನಾವಣಾ ಆಯುಕ್ತರಿಗೆ ಸಲ್ಲಿಸುತ್ತೇವೆ ಎಂದರು.

ಸಮಯ ವಿಸ್ತರಿಸಬಹುದು: ಎಸ್‍ಐಆರ್ ಪ್ರಕ್ರಿಯೆಯಲ್ಲಿ ತೊಡಗಿದ ಸಿಬ್ಬಂದಿ ನಿತ್ಯವೂ ತಮಗೆ ಸಾಧ್ಯವಾದಷ್ಟು ಮನೆಗಳನ್ನು ಭೇಟಿ ಮಾಡಿ ಪಾರದರ್ಶಕವಾಗಿ ಮಾಹಿತಿ ಪಡೆದು ಪರಿಷ್ಕರಿಸಲಿ. ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಿಲ್ಲ. ಕಾಲಮಿತಿ ಕಡಿಮೆ ಎನಿಸಿದರೆ ಚುನಾವಣಾ ಆಯೋಗ ಹೆಚ್ಚಿನ ಸಮಯ ನೀಡಬಹುದು ಎಂದು ಜೋಶಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News