"ಕೈದಿಗಳ ಜೊತೆ ನಿಮಗೆ ಸಂಪರ್ಕ ಚೆನ್ನಾಗಿರುವುದಕ್ಕೆ ಇದೇ ಸಾಕ್ಷಿ": ವೇದವ್ಯಾಸ ಕಾಮತ್ ಕಾಲೆಳೆದ ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಮಂಗಳೂರು ಜಿಲ್ಲಾ ಕಾರಾಗೃಹದ ವ್ಯಾಪ್ತಿಯಲ್ಲಿ ಜಾಮರ್ ಅಳವಡಿಕೆಯಿಂದ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಆದರೆ, ಜೈಲಿನ ಒಳಗೆ ನೆಟ್‍ವರ್ಕ್ ಸಿಗುತ್ತದೆ ಎಂದು ಇವರಿಗೆ ಹೇಗೆ ತಿಳಿದಿದೆ. ಜೈಲಿನ ಒಳಗಿರುವವರೊಂದಿಗೆ ಇವರಿಗೆ ಸಂಪರ್ಕ ಇದೆಯೇ?’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಅವರ ಕಾಲೆಳೆದ ಪ್ರಸಂಗ ನಡೆಯಿತು.
ಸೋಮವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಪ್ರಸ್ತಾಪಿಸಿದ ವಿಷಯಕ್ಕೆ ಸರಕಾರದ ಪರವಾಗಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಕಾರಾಗೃಹ ವ್ಯಾಪ್ತಿಯಲ್ಲಿನ ಜನರಿಗೆ ಜಾಮರ್ ಹಾಕಿರುವುದರಿಂದ ಜನರಿಗೆ ತೊಂದರೆ ಆಗಿದೆ. ಹೀಗಾಗಿ ಈ ಕುರಿತು ಗೃಹ ಸಚಿವರಿಂದ ಉತ್ತರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ವೇದವ್ಯಾಸ ಕಾಮತ್, ‘ಮಂಗಳೂರಿನ ಹೃದಯಭಾಗದಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿರುವ ಕಾರಣಕ್ಕೆ ಸುತ್ತಲಿನ ಪ್ರದೇಶಗಳ ಜನರು ಮೊಬೈಲ್ ಬಳಸಲು ಪರದಾಡುವಂತಾಗಿದೆ. ಆದರೆ ಜೈಲಿನ ಒಳಗೆ ನೆಟ್‍ವರ್ಕ್ ದೊರೆಯುತ್ತಿದೆ’ ಎಂದು ಉಲ್ಲೇಖಿಸಿದರು.
‘ಕಾರಾಗೃಹ ವ್ಯಾಪ್ತಿಯಲ್ಲಿನ ಎರಡ್ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್, ಕಾಲೇಜು, ಹೊಟೇಲ್ ಸೇರಿದಂತೆ ಇನ್ನಿತರ ಉದ್ದಿಮೆಗಳಿಗೆ ಸಮಸ್ಯೆಯಾಗಿದೆ. ಅಲ್ಲದೆ, ನ್ಯಾಯಾಲಯದ ಕಲಾಪವನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಇದು ವಿಚಿತ್ರ ಅನ್ನಿಸಿದರೂ ಸತ್ಯ, ಹೀಗೂ ಉಂಟೇ ಎಂಬಂತೆ ಆಗಿದೆ. ಹೀಗಾಗಿ ಈ ಸಮಸ್ಯೆ ನಿವಾರಿಸಲು ಸರಕಾರ ಕ್ರಮ ವಹಿಸಬೇಕು’ ಎಂದು ಅವರು ಕೋರಿದರು.