×
Ad

ಅಬಕಾರಿ ಲಂಚ ಪ್ರಕರಣ ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡನೆ : ಆರ್.ಅಶೋಕ್

Update: 2026-02-03 18:27 IST

ಬೆಂಗಳೂರು : ‘ಅಬಕಾರಿ ಇಲಾಖೆಯಲ್ಲಿನ ಲಂಚ ಪ್ರಕರಣ, ವರ್ಗಾವಣೆ ದಂಧೆಯನ್ನು ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸುವ ಮೂಲಕ ಕೇಂದ್ರ ಸರಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದು, ಇದರ ವಿರುದ್ದ ಹೋರಾಟ ಮಾಡುತ್ತೇವೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ನಿಯಮಾವಳಿಗಳನ್ನು ಮೀರಿ ಕೇಂದ್ರ ಸರಕಾರವನ್ನು ತೆಗಳುವ ನಿರ್ಣಯವನ್ನು ಮಂಡಿಸಿದ್ದಾರೆ. ನಿಯಮ ಪ್ರಕಾರ ಎಲ್ಲರಿಗೂ 7 ದಿನ ಮುನ್ನ ನೋಟಿಸ್ ನೀಡಬೇಕು. ಇದು ಸದನದ ನಿರ್ಣಯವಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಸರಕಾರದ ನಿರ್ಣಯ’ ಎಂದು ಹೇಳಿದರು.

‘ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ನಮ್ಮ ಮೆಟ್ರೊ ತಂದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಹೀಗಾಗಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ದ ನಿರ್ಣಯ ಮಂಡಿಸಲಾಗಿದೆ’ ಎಂದು ಅಶೋಕ್ ದೂರಿದರು.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ನಾಯಕ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಹೀಗಾಗಿ ಇಲ್ಲಿನ ಕಲಾಪದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯವಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ಜಿಎಸ್‍ಟಿ ಸಭೆಗೆ ಹೋಗುವುದಿಲ್ಲ, ಪ್ರಧಾನಿಯವರು ಕರೆದ ಸಭೆಗೆ ತೆರಳುವುದಿಲ್ಲ. ಇದೀಗ ಸೋನಿಯಾ ಗಾಂಧಿ ಮೆಚ್ಚಿಸಲು ನಿರ್ಣಯ ಮಂಡನೆ ಮಾಡಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News