ಬೆಂಗಳೂರು : 2026ರ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‍ಡಿಎ ಮೈತ್ರಿಕೂಟದ (ಬಿಜೆಪಿ-ಜೆಡಿಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿರುವ ಎ.ಪಿ.ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಈ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ವಿಜಯವಲ್ಲ, ಶಿಕ್ಷಕರ ಹಿತಾಸಕ್ತಿಗಳ ಪರವಾಗಿ ನಿಂತ ಎನ್‍ಡಿಎ ಮೈತ್ರಿಕೂಟದ ಒಗ್ಗಟ್ಟು, ಸಂಘಟಿತ ಹೋರಾಟ ಹಾಗೂ ಪ್ರಜ್ಞಾವಂತ ಮತದಾರರ ವಿವೇಚನಾಪೂರ್ಣ ನಿರ್ಧಾರಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.

ಎ.ಪಿ. ರಂಗನಾಥ್ ಅವರ ಮೇಲೆ ವಿಶ್ವಾಸವಿಟ್ಟು ತಮ್ಮ ಅಮೂಲ್ಯ ಮತಗಳ ಮೂಲಕ ಬೆಂಬಲ ನೀಡಿದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಮಸ್ತ ಗೌರವಾನ್ವಿತ ಶಿಕ್ಷಕ ಹಾಗೂ ಅಧ್ಯಾಪಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಐತಿಹಾಸಿಕ ಗೆಲುವಿಗಾಗಿ ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲ ಹಿರಿಯ ನಾಯಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ವೈಫಲ್ಯ, ಭ್ರಷ್ಟಾ ಚಾರ ಮತ್ತು ಜನವಿರೋಧಿ ನೀತಿಗಳಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಈ ಫಲಿತಾಂಶ ಮತ್ತೊಂದು ಸ್ಪಷ್ಟ ಎಚ್ಚರಿಕೆಯಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಮತದಾರರು ನೀಡುತ್ತಿರುವ ಉತ್ತರದ ಪ್ರತಿಬಿಂಬವೇ ಈ ಗೆಲುವು. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಆಡಳಿತಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಕ್ಕೆ ಇದು ಮುನ್ನುಡಿಯಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸದನದಲ್ಲಿ ಸಮರ್ಥ ಧ್ವನಿಯಾಗಿ, ಅವರ ನ್ಯಾಯಯುತ ಬೇಡಿಕೆಗಳು ಮತ್ತು ಹಕ್ಕುಗಳ ರಕ್ಷಣೆಗೆ ಬದ್ಧವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ರಾಜ್ಯದ ಶಿಕ್ಷಣ ಕ್ಷೇತ್ರದ ಗುಣಮಟ್ಟ ಮತ್ತು ಸರ್ವತೋಮುಖ ಪ್ರಗತಿಗೆ ಎ.ಪಿ. ರಂಗನಾಥ್ ಮಹತ್ವದ ಕೊಡುಗೆ ನೀಡಲಿ ಎಂದು ಅಶೋಕ್ ಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor