×
Ad

ಅಶ್ಲೀಲ ವಿಡಿಯೊ ಪ್ರಕರಣ ; ರಾಮಚಂದ್ರ ರಾವ್ ವಿರುದ್ಧ ಮಾನಹಾನಿಕರ ಸುದ್ದಿ ಬಿತ್ತರಿಸದಂತೆ ಪ್ರತಿಬಂಧಕಾದೇಶ

Update: 2026-01-21 11:40 IST

ಬೆಂಗಳೂರು: ಅಶ್ಲೀಲ ವಿಡಿಯೊ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಅಥವಾ ಸುದ್ದಿಗಳನ್ನು ಬಿತ್ತರಿಸಂತೆ ಮಾಧ್ಯಮಗಳಿಗೆ ಬೆಂಗಳೂರಿನ 25ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ವಿಧಿಸಿದೆ.

ವೆಬ್‌ಸೈಟ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ಎಲ್ಲ ಮಾನಹಾನಿಕರ ವೀಡಿಯೊಗಳು, ಆಡಿಯೊ ಕ್ಲಿಪ್‌ಗಳು, ಕರೆ ರೆಕಾರ್ಡಿಂಗ್‌ಗಳು, ದೃಶ್ಯಗಳು ಮತ್ತು ಪತ್ರಿಕಾ ವರದಿಗಳನ್ನು ತಕ್ಷಣವೇ ತೆಗೆದುಹಾಕಲು ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಜತೆಗೆ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಹಾಗೂ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.

ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಆರೋಪದಲ್ಲಿ ಸದ್ಯ ಸೇವೆಯಿಂದ ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರ ರಾವ್ ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲ ಕೃಷ್ಣ ರೈ ಅವರು ಈ ಆದೇಶ ಮಾಡಿದ್ದಾರೆ.

ಆದೇಶವೇನು?

ಪ್ರತಿವಾದಿ ಮಾಧ್ಯಮ ಸಂಸ್ಥೆಗಳು, ಅವುಗಳ ವರದಿಗಾರರು, ನಿರೂಪಕರು ಅಥವಾ ಅವುಗಳ ಪರವಾಗಿ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಗಳು ಪ್ರಕರಣದ ಮುಂದಿನ ವಿಚಾರಣೆಯವರೆಗೆ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ದೂರದರ್ಶನ ವಾಹಿನಿಗಳು, ವೆಬ್‌ಸೈಟ್‌ಗಳು, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್, ವಾಟ್ಸ್‌ಆ್ಯಪ್, ಯೂಟ್ಯೂಬ್ ಮುಂತಾದವುಗಳಲ್ಲಿ ರಾಮಚಂದ್ರ ರಾವ್ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ, ಕಾಮೆಂಟ್‌ಗಳು, ಹೇಳಿಕೆಗಳು ಅಥವಾ ಕರೆ ರೆಕಾರ್ಡಿಂಗ್‌ಗಳನ್ನು ಪ್ರಕಟಿಸುವುದು, ಬಿತ್ತರಿಸುವುದು, ಅಪ್‌ಲೋಡ್ ಮಾಡುವುದು ಅಥವಾ ಪ್ರಸಾರ ಮಾಡದಂತೆ ಏಕಪಕ್ಷೀಯ ಪ್ರತಿಬಂಧಕಾದೇಶದ ಮೂಲಕ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮುಂದುವರಿದು, ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದಂತೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳ ವೆಬ್‌ಸೈಟ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಭ್ಯವಿರುವ ಎಲ್ಲ ಮಾನಹಾನಿಕರ ವೀಡಿಯೊಗಳು, ಆಡಿಯೊ ಕ್ಲಿಪ್‌ಗಳು, ಕರೆ ರೆಕಾರ್ಡಿಂಗ್‌ಗಳು, ದೃಶ್ಯಗಳು ಮತ್ತು ಪತ್ರಿಕಾ ವರದಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣವೇನು?

ರಾಜ್ಯದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಕೆಲ ಅಶ್ಲೀಲ ವಿಡಿಯೋಗಳು ಮತ್ತು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದ್ದವು. ಇದರ ಬೆನ್ನಲ್ಲೇ ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಇದರಿಂದ, ನ್ಯಾಯಾಲಯದ ಮೊರೆ ಹೋಗಿರುವ ರಾಮಚಂದ್ರ ರಾವ್, ತಮಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೊ ಮತ್ತು ಆಡಿಯೋ ತುಣುಕುಗಳ ಆಧಾರದ ಮೇಲೆ ಹಲವಾರು ಕನ್ನಡ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳು ದುರುದ್ದೇಶಪೂರಿತ, ಪರಿಶೀಲಿಸದ ಮತ್ತು ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡುತ್ತಿವೆ. ಆದ್ದರಿಂದ, ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸದಂತೆ ಪ್ರತಿಬಂಧಕಾದೇಶ ವಿಧಿಸಬೇಕು ಹಾಗೂ ಈಗಾಗಲೇ ಪ್ರಕಟಿಸಲಾಗಿರುವ ಸುದ್ದಿಗಳು, ವಿಡಿಯೊ ಹಾಗೂ ಆಡಿಯೊ ತುಣುಗಳನ್ನು ಅಳಿಸಿಹಾಕಲು ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News