×
Ad

‘ಉಪ ಲೋಕಾಯುಕ್ತರು ನಿಮ್ಮ ಕೆಲಸ ನೆನಪಿಸಬೇಕಾ?’ : ಎಪಿಎಂಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಶಿವಾನಂದ ಪಾಟೀಲ್

Update: 2026-01-20 22:44 IST

ಬೆಂಗಳೂರು : ‘ರೈತರಿಗೆ ಕುಡಿಯುವ ನೀರು ಕೊಡಿ, ಶೌಚಾಲಯ ವ್ಯವಸ್ಥೆ ಮಾಡಿ’ ಎಂದು ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ? ನಿಮ್ಮ ಕರ್ತವ್ಯ ಏನು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಇಂದಿಲ್ಲಿ ಎಪಿಎಂಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲವು ಎಪಿಎಂಸಿಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಪಗಳ ಮೇಲೆ ಅವರು ಬೆಳಕು ಚೆಲ್ಲಿದ ಮೇಲೂ ಮೇಲೂ ಸರಿಪಡಿಸದಿದ್ದರೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು.

ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಹಲವು ಸೇವೆಗಳನ್ನು ಒದಗಿಸಲು ಹೊರಗುತ್ತಿಗೆ ನೀಡಿದ್ದು, ಪ್ರತಿ ತಿಂಗಳು ಸಕಾಲಕ್ಕೆ ಅವರಿಗೆ ಹಣ ಪಾವತಿ ಮಾಡುತ್ತೀರಿ. ಆದರೆ, ಅವರಿಂದ ಕೆಲಸ ಪಡೆಯುವುದು ಯಾರ ಜವಾಬ್ದಾರಿ. ನಿಮ್ಮ ಕೆಲಸ ಏನು ಎಂಬುದನ್ನು ಉಪ ಲೋಕಾಯುಕ್ತರು, ಮಂತ್ರಿಗಳು ಹೇಳಬೇಕಾ? ನಿಮ್ಮ ನಿಮ್ಮ ಕೆಲಸಗಳ ಬಗ್ಗೆ ನಿಮಗೆ ಅರಿವು, ಜವಾಬ್ದಾರಿ ಇಲ್ಲವೇ? ಎಂದು ಅವರು ಕೇಳಿದರು.

‘ತೂಕದ ಯಂತ್ರಗಳು ಸರಿಯಾಗಿಲ್ಲ, ದಲ್ಲಾಲರು ರೈತರಿಂದ ಹೆಚ್ಚುವರಿ ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಉಪಲೋಕಾಯುಕ್ತರು, ಎಪಿಎಂಸಿಗಳಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ. ಎಲ್ಲ ಎಪಿಎಂಸಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಮ್ಮ ಕೆಲಸವನ್ನೂ ಉಪ ಲೋಕಾಯುಕ್ತರು ಹೇಳಬೇಕಾ? ಇಲ್ಲಾ, ಮಂತ್ರಿ ಹೇಳಬೇಕಾ? ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಎಪಿಎಂಸಿಗಳ ಆಡಳಿತ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕಾಗಿದೆ. ಅಸಮರ್ಥ ಅಧಿಕಾರಿಗಳನ್ನು ಗುರುತಿಸಿ ಅಂತಹ ಅಧಿಕಾರಿಗಳನ್ನು ಬದಲಾವಣೆ ಮಾಡಿ ಸಮರ್ಥರನ್ನು ನೇಮಕ ಮಾಡಿ ಎಂದು ಅವರು, ನಿರ್ದೇಶಕರಿಗೆ ಸೂಚಿಸಿದರು.

ಕೆಲವು ಎಪಿಎಂಸಿಗಳಲ್ಲಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ನಿವೃತ್ತಿ ಅಂಚಿನಲ್ಲಿರುವವರು ರಜೆ ಮೇಲೆ ಹೋಗಿದ್ದಾರೆ. ಅಂತಹ ಕಡೆ ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿ. ನಿವೃತ್ತಿ ಸಮೀಪ ಇರುವ ಕಾರಣಕ್ಕೆ ರಜೆ ಮೇಲೆ ಇರುವವರನ್ನು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ. ಅವರು ಕೇಂದ್ರ ಕಚೇರಿಯಲ್ಲೇ ನಿವೃತ್ತಿ ಪಡೆಯಲಿ. ಅವರ ಅನುಕೂಲತೆಗೆ ರೈತರಿಗೆ ಸಮಸ್ಯೆಯಾಗಬಾರದು ಎಂದರು

ಅಧಿಕಾರಿಗಳಿಗೆ ತಮ್ಮ ಎಪಿಎಂಸಿ ವ್ಯಾಪ್ತಿಯಲ್ಲಿನ ಕೃಷಿ ಉತ್ಪನ್ನಗಳ ಇಳುವರಿ ಹಾಗೂ ಮಾರುಕಟ್ಟೆಗೆ ಅವಕವಾಗುವ ಪ್ರಮಾಣದ ಮಾಹಿತಿ ಇರಬೇಕು. ಪ್ರಾಥಮಿಕ ಮಾಹಿತಿ ಇಲ್ಲದಿದ್ದರೆ ಎಪಿಎಂಸಿಗಳನ್ನು ಹೇಗೆ ನಿಭಾಯಿಸುತ್ತೀರಿ, ಸಭೆ ಕರೆದಾಗ ಇಲ್ಲಿ ಕುಳಿತು ಕೆಲಸ ಮಾಡುವುದು ಸರಿಯಲ್ಲ. ಮುಂದಿನ ಸಭೆಗೆ ಹಾಜರಾಗುವ ಸಂದರ್ಭದಲ್ಲಿ ನಿಮ್ಮ ಬಳಿ ಪೂರ್ಣ ಮಾಹಿತಿ ಇರಬೇಕು ಎಂದು ಹೇಳಿದರು.

ವಿಭಾಗಾವಾರು ವಿಜಿಲೆನ್ಸ್ ರಚನೆ ಮಾಡಿದ ಉದ್ದೇಶ ಫಲ ನೀಡಿಲ್ಲ. ವಿಜಿಲೆನ್ಸ್ ಮುಖ್ಯಸ್ಥರು ತಮ್ಮ ತಮ್ಮ ವ್ಯಾಪ್ತಿಯ ಕಾರ್ಯದರ್ಶಿಗಳು ಹಾಗು ಸಹಾಯಕ ನಿರ್ದೇಶಕರ ಸಭೆಗಳನ್ನುನಿಯಮಿತವಾಗಿ ನಡೆಸಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಸೆಸ್ ಪ್ರಮಾಣ ಕಡಿಮೆ ಮಾಡಿರುವುದರಿಂದ ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂಬ ವಿಜಿಲೆನ್ಸ್ ಅಧಿಕಾರಿಗಳ ಮಾತನ್ನು ಒಪ್ಪದ ಸಚಿವರು, ವಿಜಿಲೆನ್ಸ್ ತಂಡ ಚುರುಕಾಗಬೇಕು ಎಂದರು.

ಶೈಥ್ಯಾಗಾರ(ಕೋಲ್ಡ್ ಸ್ಟೊರೇಜ್) ಸೇರಿದಂತೆ ಅನೇಕ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರಿಗೆ ಗಡುವು ವಿಸ್ತರಣೆ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡಲಾಗುತ್ತಿದೆ. ಆದರೂ, ಯಾವ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡಬಾರದು ಎಂದು ಅವರು ಸೂಚಿಸಿದರು.

ಪ್ರಗತಿ ವಿವರ ನೀಡಿದ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ ಅವರು, ಪ್ರಗತಿ ಗುರಿ ಸಾಮಾನ್ಯವಾಗಿ ಪ್ರತಿವರ್ಷ ಪ್ರತಿಶತ ಹತ್ತರಷ್ಟು ಹೆಚ್ಚಿರುತ್ತದೆ. ಆದರೆ ನಮ್ಮ ಗುರಿ ಪ್ರತಿಶತ ನಲವತ್ತರಷ್ಟಿದೆ. ಈ ಗುರಿ ತಲುಪುವ ವಿಶ್ವಾಸ ಇದೆ ಎಂದರು. ಈ ವೇಳೆ ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News