ಪವಿತ್ರಾ ಗೌಡ  

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಮೊದಲ ಆರೋಪಿ ಪವಿತ್ರಾ ಗೌಡ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಪವಿತ್ರಾ ಗೌಡ ಸಲ್ಲಿಸಿರುವ ಹೊಸ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆ ಕೇಳಿದೆ.

ರಾಜ್ಯ ಹೈಕೋರ್ಟ್ 2024ರ ಡಿಸೆಂಬರ್‌ನಲ್ಲಿ ಪವಿತ್ರಾ ಗೌಡ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, 2025ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿತ್ತು. ಇದಾದ ಬಳಿಕ, ಪವಿತ್ರಾ ಗೌಡ ಸಲ್ಲಿಸಿದ್ದ ಹೊಸ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 26ರಂದು ತಿರಸ್ಕರಿಸಿತ್ತು. ಇದರಿಂದ, ಪವಿತ್ರಾ ಗೌಡ ಹೊಸದಾಗಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪವಿತ್ರಾ ಅರ್ಜಿಯಲ್ಲೇನಿದೆ?

ಪ್ರಕರಣದ ವಿಚಾರಣೆ ಮುಂದುವರಿದಿರುವುದು ಹಾಗೂ ಈವರೆಗೆ ದಾಖಲಾಗಿರುವ ಸಾಕ್ಷ್ಯಗಳು ತಮ್ಮ ಜಾಮೀನು ಮನವಿಯನ್ನು ಮರುಪರಿಶೀಲಿಸಲು ಆಧಾರವಾಗಿವೆ ಎಂದು ಅರ್ಜಿಯಲ್ಲಿ ವಿವರಿಸಿರುವ ಪವಿತ್ರಾ, ಪ್ರಕರಣದಲ್ಲಿ ಈವರೆಗೆ ಪ್ರಾಸಿಕ್ಯೂಷನ್ 34 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇನ್ನೂ ಹಲವು ಸಾಕ್ಷಿಗಳ ವಿಚಾರಣೆ ಬಾಕಿ ಇದ್ದು, ವಿಚಾರಣೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ತಮ್ಮ ಮೇಲಿರುವ ಆರೋಪಿತ ಪಾತ್ರವನ್ನು ಇತರ ಆರೋಪಿಗಳ ಪಾತ್ರದಿಂದ ಪ್ರತ್ಯೇಕವಾಗಿ ಪರಿಗಣಿಸಬೇಕು. ಇತರ ಆರೋಪಿಗಳು ಎಸಗಿದ್ದಾರೆ ಎನ್ನಲಾದ ಕೃತ್ಯಗಳಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗದು. ತಮ್ಮ ವಿರುದ್ಧ ಆರೋಪಿಸಲಾಗಿರುವ ನಡವಳಿಕೆ ಮತ್ತು ಇತರ ಆರೋಪಿಗಳು ನಡೆಸಿದ್ದಾರೆ ಎನ್ನಲಾದ ಮಾರಣಾಂತಿಕ ಹಲ್ಲೆಯ ನಡುವಿನ ವ್ಯತ್ಯಾಸವನ್ನು ಸ್ವತಂತ್ರವಾಗಿ ಪರಿಗಣಿಸಬೇಕಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ತನಿಖೆ ಸಂದರ್ಭದಲ್ಲಿ ತಾವು ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ಹಾಜರಾಗಿದ್ದು, ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರಲಿಲ್ಲ. ಜಾಮೀನು ನೀಡಿದರೆ ವಿಚಾರಣೆಗೆ ಸಹಕರಿಸುವುದಾಗಿ ಹಾಗೂ ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೆ ಬದ್ಧವಿರುವುದಾಗಿ ಪವಿತ್ರಾ ಗೌಡ ಭರವಸೆ ನೀಡಿದ್ದಾರೆ.

ಕುಟುಂಬದ ಪರಿಸ್ಥಿತಿಯನ್ನೂ ಅರ್ಜಿಯಲ್ಲಿ ಉಲ್ಲೇಖಿಸಿರುವ ಪವಿತ್ರಾ, 17 ವರ್ಷದ ಮಗಳು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಒಂಟಿ ಪೋಷಕರಾಗಿರುವುದರಿಂದ ಮಗಳ ಆರೈಕೆಯ ಜವಾಬ್ದಾರಿ ತಮ್ಮ ಮೇಲಿದೆ. ಜತೆಗೆ, ವೃದ್ಧ ತಂದೆ-ತಾಯಿಯೂ ಭಾವನಾತ್ಮಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor