ಬಿ.ಕೆ. ಹರಿಪ್ರಸಾದ್ 

ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಆನೆ ಹಾವಳಿ ಸಮಸ್ಯೆಗೆ ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರಿಗೆ ಸಲಹೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಯನಾ ಮೋಟಮ್ಮ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಕೈಬಿಟ್ಟಿದ್ದು, ವಿದೇಶಿ ಪ್ರವಾಸ ತೆರಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರು ಹಿಂದಿರುಗಿದ ನಂತರ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಡಾನೆಗಳ ಹಾವಳಿ ವಿಚಾರವಾಗಿ ನಾನು ಈಗಾಗಲೇ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಅವರು ಶಾಸಕರೊಂದಿಗೆ ಮಾತನಾಡಿದ್ದಾರೆ. ದುಡುಕಿ ರಾಜೀನಾಮೆ ಕೊಡುವ ಬದಲು ನಾವೆಲ್ಲರೂ ಸೇರಿ ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಆನೆಗಳ ಹಾವಳಿ ಕುರಿತು ನಮ್ಮ ಪಕ್ಷದ ಶಾಸಕಿ ನಯನಾ ಅಚರ ಆರೋಪ ಎಂಬುದಕ್ಕಿಂತ ಹೆಚ್ಚಾಗಿ, ಅಲ್ಲಿನ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಚಿಕ್ಕಮಗಳೂರಿನಲ್ಲಿ ಈಗಾಗಲೇ ಸುಮಾರು 20 ರಿಂದ 22 ಜನ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಸ್ಥಳೀಯ ಜನರ ನೋವು ಮತ್ತವರ ಅನಿಸಿಕೆಗಳನ್ನು ಶಾಸಕರು ವ್ಯಕ್ತಪಡಿಸಿದ್ದಾರೆ, ಅವರು ಹೇಳುತ್ತಿರುವುದು ನಿಜವೇ ಆಗಿದೆ ಎಂದು ಹರಿಪ್ರಸಾದ್ ಹೇಳಿದರು.

ಇದೇ ಸಮಯದಲ್ಲಿ, ನಾವು ಕಾಡು ಪ್ರಾಣಿಗಳನ್ನೂ ಮನುಷ್ಯರಂತೆಯೇ ನೋಡಬೇಕಾಗುತ್ತದೆ. ಯಾವುದೋ ಕಾರಣದಿಂದ ಇಂತಹ ಘಟನೆಗಳು ಸಂಭವಿಸಿದ್ದು, ಅದನ್ನು ಸರಿಪಡಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದ್ದಾರೆ. ರಾಜೀನಾಮೆ ನೀಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುವುದಿಲ್ಲ. ಸಿಎಂ ಪ್ರವಾಸದಿಂದ ಆಗಮಿಸಿದ ಬಳಿಕ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಆನೆಗಳ ಸ್ಥಳಾಂತರ ವಿರೋಧಿಸಿ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಸೋಮವಾರ(ನ.23) ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಿದ್ದಪಡಿಸಿ, ವಿಧಾನಸೌಧದ ಸ್ಪೀಕರ್ ಕಚೇರಿಗೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಇಲ್ಲದ ಕಾರಣ ಹಿಂದಿರುಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ/ವಾರ್ತಾಭಾರತಿ

contributor