ಮೆಡಿಕಲ್ ಕಾಲೇಜುಗಳು ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿದರೆ ದೂರು ಸಲ್ಲಿಸಲು ಸೂಚನೆ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಮೆಡಿಕಲ್ ಕಾಲೇಜುಗಳು ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿದರೆ, ಸಂತ್ರಸ್ತ ವಿದ್ಯಾರ್ಥಿಗಳು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.
ಮಂಗಳವಾರ ಪ್ರಾಧಿಕಾರವು ಪ್ರಕಟನೆ ಹೊರಡಿಸಿದ್ದು, ವಿದ್ಯಾರ್ಥಿಗಳು ಯುಜಿ ಮತ್ತು ಪಿಜಿ ಪ್ರವೇಶದ ಸಮಯದಲ್ಲಿ ವಿಶ್ವವಿದ್ಯಾಲಯದ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಿರುತ್ತಾರೆ. ಪ್ರಾಧಿಕಾರವು ವಿಶ್ವವಿದ್ಯಾಲಯದ ಶುಲ್ಕವನ್ನು ನೇರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಪಾವತಿಸಿರುತ್ತದೆ. ಆದರೂ ಕೆಲವು ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಪಡೆಯಲು ಮುಂದಾಗುತ್ತವೆ ಎಂದು ತಿಳಿಸಿದೆ.
ರಾಜ್ಯ ಸರಕಾರ ಮತ್ತು ಕಾಲೇಜುಗಳ ನಡುವೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಅನುಮತಿಯಿಲ್ಲದ 30 ಸಾವಿರ ರೂ.ಗಳ ಸ್ಕಿಲ್ ಲ್ಯಾಬ್ ಶುಲ್ಕವನ್ನು ಹಾಗೂ 15 ರೂ.ಗಳ ಇತರೆ ಶುಲ್ಕವನ್ನು ಸಂಗ್ರಹಿಸಲು ಅವಕಾಶವಿದೆ. ಇದಕ್ಕಿಂತ ಹೆಚ್ಚಾಗಿ ಹಣವನ್ನು ವಸೂಲಿ ಮಾಡಿದರೆ, ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ನೀಡಲು ಸೂಚನೆ ನೀಡಿದೆ.