ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದು ಸುಳ್ಳು ಸುದ್ದಿ: ಬಿ.ಆರ್. ಪಾಟೀಲ್ ಸ್ಪಷ್ಟನೆ

"ಸಚಿವ ಸ್ಥಾನ ದೊರಕದಿರುವುದು ನೋವು ಮತ್ತು ಅಸಮಾಧಾನ ಉಂಟುಮಾಡಿದೆ"

Update: 2026-08-05 14:23 IST

ಬೆಂಗಳೂರು: "ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿ" ಎಂದು ಮಾಜಿ ಸಚಿವ ಬಿ. ಆರ್‌ ಪಾಟೀಲ್‌ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, "ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು  ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ" ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಶಾಸಕ ಸ್ಥಾನವು ನನಗೆ ದೊರೆತಿರುವ ಹುದ್ದೆಯಲ್ಲ; ಅದು ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಜವಾಬ್ದಾರಿಯ ಸಂಕೇತ. ಆ ಜನಾದೇಶಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಗೆಲ್ಲಿಸಿದ ಜನರ ಆಶಯಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆ. ಸಚಿವ ಸ್ಥಾನ ಇರಲಿ, ಇಲ್ಲದಿರಲಿ, ನಾನು ನನ್ನ ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದಿದ್ದಾರೆ.

ಸಚಿವ ಸ್ಥಾನ ದೊರಕದಿರುವುದು ನನಗೂ ಸಹಜವಾಗಿ ನೋವು ಮತ್ತು ಅಸಮಾಧಾನ ಉಂಟುಮಾಡಿದೆ. ಆದರೆ, ಐದು ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಹುದ್ದೆಗಿಂತ ಪಕ್ಷ, ವೈಯಕ್ತಿಕ ಹಿತಾಸಕ್ತಿಗಿಂತ ತತ್ವ ಮತ್ತು ಸಿದ್ಧಾಂತಗಳೇ ನನಗೆ ಮುಖ್ಯವಾದುದು. ಪಕ್ಷದ ಮೇಲಿನ ನನ್ನ ನಿಷ್ಠೆ ಅಚಲವಾಗಿದೆ. ಸಮಾಜವಾದಿ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಪರವಾದ ನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ ಎಂಬ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು. ಮಾಧ್ಯಮಗಳು ಕೂಡ ವಾಸ್ತವಾಂಶಗಳನ್ನು ಪರಿಶೀಲಿಸಿ ಜನತೆಗೆ ಸರಿಯಾದ ಮಾಹಿತಿ ನೀಡುವಂತೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News