×
Ad

ಆರೆಸ್ಸೆಸ್‌ ನಾಯಕ ರಾಮ್ ಮಾಧವ್ ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ: ಬಿ.ಕೆ.ಹರಿಪ್ರಸಾದ್ ಆರೋಪ

Update: 2026-07-01 17:27 IST

ಬಿ.ಕೆ.ಹರಿಪ್ರಸಾದ್‌/ರಾಮ್ ಮಾಧವ್(File Photo: PTI)

ಬೆಂಗಳೂರು : ಬೆಂಗಳೂರಿನಲ್ಲಿ ಸದ್ಯದಲ್ಲೇ ಚುನಾವಣೆ ಬರಲಿದೆ. ಆರೆಸ್ಸೆಸ್‌ ನಾಯಕ ರಾಮ್ ಮಾಧವ್ ಗೆ ಬೆಂಗಳೂರು ಉಸ್ತುವಾರಿ ವಹಿಸಿದ್ದಾರೆ. ಅವರ ಇತಿಹಾಸವನ್ನು ನೀವು ನೋಡಬೇಕು. ಅವರು ಕೊಲಂಬೊ, ಲಂಡನ್ ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಕೆಪಿಸಿಸಿ ವತಿಯಂದ ಬೆಂಗಳೂರಿನ ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ' ಭವನದಲ್ಲಿ ಆಯೋಜಿಸಿದ್ದ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಹೇಳಿದ್ದರು. ಆದರೆ ಮೊನ್ನೆ ರಾಜನಾಥ್ ಸಿಂಗ್ ಅವರು ಆರು ಸೈನಿಕರು ಮೃತಪಟ್ಟಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ಇದರಲ್ಲೇ ಅರ್ಥವಾಗುತ್ತದೆ. ದೇಶಕ್ಕೆ ಪ್ರಾಣ ಕೊಟ್ಟವರ ಹೆಸರು ಹೇಳಲು ಇವರಿಗೆ ಸಾಧ್ಯವಾಗುವುದಿಲ್ಲ. ಆಪರೇಷನ್ ಸಿಂಧೂರ್ ಆಗಿ 2 ತಿಂಗಳಾಗಿದ್ದು, ಆಗಲೇ ರಾಮ್ ಮಾಧವ್ ಅವರು ಲಂಡನ್ ನಲ್ಲಿ ಸಭೆ ಮಾಡಿದ್ದಾರೆ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಲಸೂತ್ರದ ಬಗ್ಗೆ ಮಾತನಾಡುತ್ತಾರೆ. ರಾಮ್ ಮಾಧವ್ ಅವರು ಜಿಬಿಎ ಚುನಾವಣೆಗೆ ಬರುವಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪಾಕಿಸ್ತಾನದವರೊಂದಿಗೆ ರಹಸ್ಯ ಸಭೆ ಮಾಡಲು ಅಧಿಕಾರ ಕೊಟ್ಟವರು ಯಾರು? ಇವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ, ಸಂಸದರೂ ಅಲ್ಲ. ಆರೆಸ್ಸೆಸ್ ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.

ಯಾವ ಅಧಿಕಾರ ಇಟ್ಟುಕೊಂಡು ಆರೆಸ್ಸೆಸ್ ನವರು ವಿದೇಶಾಂಗ ನೀತಿ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ? ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ? ಆಪರೇಷನ್ ಸಿಂಧೂರ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ? ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News