ದೇವಸ್ಥಾನಗಳನ್ನು ಲೂಟಿ ಮಾಡಿರುವ ಆರೆಸ್ಸೆಸ್, ಬಿಜೆಪಿಗರಿಂದ ದೇವರ ಬಗ್ಗೆ ಪಾಠ: ಬಿ.ಕೆ. ಹರಿಪ್ರಸಾದ್ ಟೀಕೆ
ಬೆಂಗಳೂರು: ಭಾರತ ಜೋಡೋ ಭವನದಲ್ಲಿ ವಿಚಾರ ಸಂಕಿರಣ
ಬೆಂಗಳೂರು: ಬಿಜೆಪಿಯವರು ರಿವರ್ಸ್ ಗೇರ್ ನಲ್ಲಿ ಹೋಗುತ್ತಿದ್ದಾರೆ. ಜನರು ಅನಕ್ಷರಸ್ಥರಿದ್ದಷ್ಟು ಅಂಧಭಕ್ತರನ್ನು ಸೃಷ್ಟಿಸಬಹುದು. ಜಾತಿ ಹೆಸರಿನಲ್ಲಿ ಜಗಳ ಮಾಡಿಸಬಹುದು. ಜಾತಿ ಧರ್ಮದ ಹೆಸರಿನ ಗಲಾಟೆಯಲ್ಲಿ ಜೈಲಿಗೆ ಹೋಗುವವರು ದಲಿತರು, ಶೂದ್ರರು. ಆದರೆ ರಾಮಮಂದಿರ ಲೂಟಿ ಮಾಡಿದವರು ಯಾರು? ದಲಿತರು, ಶೂದ್ರರೇ? ದೇವಸ್ಥಾನ ಕಟ್ಟಲು ಹೊರಟವರೇ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲಿ ಮುಹಮದ್ ಘಝ್ನಿ ಭಾರತವನ್ನು 17 ಬಾರಿ ಲೂಟಿ ಮಾಡಿದ್ದಾನೆ ಎಂದು ಓದಿದ್ದೇವೆ. ಅವರನ್ನು ಬಿಟ್ಟರೆ, ದೇವಸ್ಥಾನಗಳನ್ನು ಲೂಟಿ ಮಾಡಿರುವವರು ಆರೆಸ್ಸೆಸ್ ಹಾಗೂ ಬಿಜೆಪಿಯವರು. ಇವರು ನಮಗೆ ದೇವರ ಬಗ್ಗೆ ಪಾಠ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ವತಿಯಂದ ಬೆಂಗಳೂರಿನ ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ' ಭವನದಲ್ಲಿ ಆಯೋಜಿಸಿದ್ದ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪೂರ್ವಜರು ಬಹಳ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಸುಮಾರು 6-7 ರಾಜ ಸಂಸ್ಥಾನಗಳು ಭಾರತದೊಂದಿಗೆ ಸೇರುವುದಿಲ್ಲ, ನಾವು ರಾಜರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದರು. ಕಾಶ್ಮೀರ, ಗುಜರಾತ್, ಭೋಪ್ ನವಾಬರು, ಹೈದರಾಬಾದ್ ನಿಝಾಮ ಮನವೊಲಿಸಿದ ಬಳಿಕ ಭಾರತದೊಂದಿಗೆ ಸೇರ್ಪಡೆಯಾದರು. ಹೈದರಾಬಾದ್ ಒಂದು ವರ್ಷ ತಡವಾಗಿ ದೇಶವನ್ನು ಸೇರಿತು ಎಂದರು.
1952ರಲ್ಲಿ ನೆಹರು ಅವರು ಮೊದಲ ಬಜೆಟ್ ಮಂಡನೆ ಮಾಡಿದಾಗ 400 ಕೋಟಿ ರೂ. ಇತ್ತು. 1947ರಲ್ಲಿ ಮಧ್ಯಂತರ ಸರಕಾರ ಬಂದಾಗ ನೆಹರು ಅವರು ಪ್ರಧಾನ ಮಂತ್ರಿಯಾಗಿದ್ದಾಗ 198 ಕೋಟಿ ಬಜೆಟ್ ಇಟ್ಟು. ಸಾಕ್ಷರತೆ 11% ಇತ್ತು. ದೇಶದ ಜನರು ಸ್ವಾತಂತ್ರ್ಯ ಹೋರಾಟದ 25% ಇತಿಹಾಸ ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ, ಕರಿ ಟೋಪಿಯವರು ಊರು ಬಿಟ್ಟು ಹೋಗುತ್ತಾರೆ. ಆ ಸಂಘಟನೆಯವರು ಮಹಾತ್ಮಾ ಗಾಂಧಿಯವರ ಸರ್ವಧರ್ಮ ಸಮ ಎಂಬ ತತ್ವ ಸಿದ್ಧಾಂತ, ಭಾರತದ ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪಿಕೊಂಡರೆ ನಾವು ಅವರನ್ನು ವಿರೋಧಿಸುವುದಿಲ್ಲ. ಅವರು ನಮ್ಮ ಶತ್ರುಗಳಲ್ಲ, ಅವರು ನಮ್ಮ ಭಾರತ ದೇಶದವರೇ ಆದರೆ ದೇಶದ ಭದ್ರಬುನಾದಿಯಾಗಿರುವ ಸಂವಿಧಾನ, ಪ್ರಜಾತಂತ್ರ, ತ್ರಿವರ್ಣಧ್ವಜ, ಜಾತ್ಯತೀತ ತತ್ವ ಒಪ್ಪಿದರೆ ನಾವು ಅವರನ್ನು ವಿರೋಧ ಮಾಡುವುದಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಹೋರಾಟದ ವಿರುದ್ಧವಿದ್ದರು, ಸ್ವಾತಂತ್ರ್ಯ ಬಂದ ನಂತರವೂ ದೇಶದ ಆಶಯಗಳಿಗೆ ವಿರುದ್ಧವಾಗಿದ್ದಾರೆ. ಹೀಗಾಗಿ ಅವರನ್ನು ನಾವು ವಿರೋಧ ಮಾಡಲೇಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವು ಹಿಂಸೆ, ಸುಳ್ಳಿನ ಭಾರತ ದೇಶವನ್ನು ಕೊಡಬಾರದು. ದೇಶಕ್ಕಾಗಿ ಕಾಂಗ್ರೆಸ್ ನ ಎಷ್ಟು ಜನ ಪ್ರಾಣತ್ಯಾಗ ಮಾಡಿದ್ದಾರೆ ಎಂಬುದನ್ನು ಅರಿಯಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಡತನ ಕಿತ್ತು ತಿನ್ನುವಂತಿತ್ತು. 60-70% ಜನ ಹಸಿವಿನಿಂದ ಬಳಲುತ್ತಿದ್ದರು. ವಿದೇಶದಿಂದ ಆಹಾರ ಪಡೆಯಲಾಗುತ್ತಿತ್ತು. ನೆಹರು, ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದಲ್ಲಿ ಹಸಿರು ಕ್ರಾಂತಿ ಮಾಡಿ, ವಿಶ್ವದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರ ಭಾರತವಾಗಿದೆ. ಡೆನ್ಮಾರ್ಕ್ ನಿಂದ ಹಾಲಿನ ಪುಡಿ ಪಡೆಯುತ್ತಿದ್ದ ಭಾರತ ಇಂದು ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ತರಕಾರಿ ಉತ್ಪಾದನೆಯಲ್ಲಿ ಚೀನಾ ಹಾಗೂ ಬ್ರೆಝಿಲ್ ನಂತರ ಭಾರತ ಸ್ಥಾನ ಪಡೆದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಇದೆಲ್ಲವನ್ನು ಮೋದಿ, ಆರೆಸ್ಸೆಸ್ ನವರು ಬಂದು ಮಾಡಿದರಾ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ನಾನು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವ ಹಿಂದು ಧರ್ಮ ಮಹಾತ್ಮಾ ಗಾಂಧಿ, ವಿವೇಕಾನಂದ, ನಾರಾಯಣಗುರು, ಕನಕದಾಸ, ಬಸವಣ್ಣ ಹೇಳುವ ಧರ್ಮ. ಗೋಳ್ವಾಲ್ಕರ್, ಗೋಡ್ಸೆ, ಹೆಡಿಗೆವಾರ್ ಅವರು ಹೇಳುವ ಹಿಂದೂ ಧರ್ಮ ಪಾಲಿಸುವುದಿಲ್ಲ. ಜಾತ್ಯತೀತ ತತ್ವ ಎಂದರೆ ಎಲ್ಲಾ ಧರ್ಮಗಳು ಒಂದಾಗಿ ಸಾಗುವುದು. ಇಂತಹ ದೇಶ ಇಡೀ ಪ್ರಪಂಚದಲ್ಲಿ ಎಲ್ಲೂ ಸಿಕ್ಕುವುದಿಲ್ಲ. 7 ಧರ್ಮಗಳು ಇರುವ ದೇಶ ಭಾರತ. 21 ಅಧಿಕೃತ ಭಾಷೆ, ಅನಧಿಕೃತವಾಗಿರುವ 19 ಸಾವಿರ ಭಾಷೆಗಳಿವೆ. ಇಂತಹ ವೈವಿಧ್ಯ ನಾಶ ಮಾಡುತ್ತಿದ್ದಾರೆ. ಒಂದು ರಾಷ್ಟ್ರ ಒಂದು ಶಿಕ್ಷಣ, ಒಂದು ದೇಶ ಒಬ್ಬ ನಾಯಕ, ಒಂದು ದೇಶ ಒಂದು ಧರ್ಮ ಮಾಡಲು ಹೊರಟಿದ್ದಾರೆ. ಕೆಲವರನ್ನು ದೂರವಿಡಲು ಈ ರೀತಿ ಮಾಡುತ್ತಿದ್ದಾರೆ. ಇದನ್ನು ಮಾಡಲು ಸಾಧ್ಯವಿಲ್ಲ. ಬಹುತ್ವ ಭಾರತದ ಆತ್ಮ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿಯ ಕೆಲಸ ಕಾಂಗ್ರೆಸ್ ಸರ್ಕಾರದ ಆಚಾರ ವಿಚಾರ ಪ್ರಚಾರ ಮಾಡುವುದಾಗಿದೆ. ಅದರ ಹೊರತಾಗಿ ನೀವು ಬೇರೆ ಏನನ್ನೂ ಮಾಡಬೇಡಿ. ಬೆಂಗಳೂರಿನಲ್ಲಿ ಸಧ್ಯದಲ್ಲೇ ಚುನಾವಣೆ ಬರಲಿದೆ. ರಾಮ್ ಮಾಧವ್ ಎಂಬ ಆರೆಸ್ಸೆಸ್ ನಿಂದ ಬೆಂಗಳೂರು ಉಸ್ತುವಾರಿ ವಹಿಸಿದ್ದಾರೆ. ಅವರ ಇತಿಹಾಸವನ್ನು ನೀವು ನೋಡಬೇಕು. ಅವರು ಕೊಲಂಬೊ, ಲಂಡನ್ ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐ ನ ಮಾಜಿ ಮೇಜರ್ ಜೆನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ. ಇತ್ತೀಚೆಗೆ ಅವರ ಗುರುಗಳಾದ ಮೋಹನ್ ಭಾಗವತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ನಾನು ಮಾತನಾಡಿದಾಗ 2 ವರ್ಷ ನನ್ನ ಹಿಂದೆ ಬಿದ್ದಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಬಳಿಕ ನನ್ನ ಸಹವಾಸ ಬಿಟ್ಟರು ಎಂದರು.
ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಹೇಳಿದ್ದರು. ಆದರೆ ಮೊನ್ನೆ ರಾಜನಾಥ್ ಸಿಂಗ್ ಅವರು ಆರು ಸೈನಿಕರು ಸತ್ತಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ಇದರಲ್ಲೇ ಅರ್ಥವಾಗುತ್ತದೆ. ದೇಶಕ್ಕೆ ಪ್ರಾಣ ಕೊಟ್ಟವರ ಹೆಸರು ಹೇಳಲು ಇವರಿಗೆ ಸಾಧ್ಯವಾಗುವುದಿಲ್ಲ. ಆಪರೇಷನ್ ಸಿಂಧೂರ್ ಆಗಿ 2 ತಿಂಗಳಾಗಿದ್ದು, ಆಗಲೇ ರಾಮ್ ಮಾಧವ್ ಅವರು ಲಂಡನ್ ನಲ್ಲಿ ಸಭೆ ಮಾಡಿದ್ದಾರೆ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಲಸೂತ್ರದ ಬಗ್ಗೆ ಮಾತನಾಡುತ್ತಾರೆ. ರಾಮ್ ಮಾಧವ್ ಅವರು ಜಿಬಿಎ ಚುನಾವಣೆಗೆ ಬರುವಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು.
ಪಾಕಿಸ್ತಾನದವರೊಂದಿಗೆ ರಹಸ್ಯ ಸಭೆ ಮಾಡಲು ಅಧಿಕಾರ ಕೊಟ್ಟವರು ಯಾರು? ಇವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ, ಸಂಸದರೂ ಅಲ್ಲ. ಆರೆಸ್ಸೆಸ್ ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.
ಯಾವ ಅಧಿಕಾರ ಇಟ್ಟುಕೊಂಡು ಆರೆಸ್ಸೆಸ್ ನವರು ವಿದೇಶಾಂಗ ನೀತಿ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ? ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ? ಆಪರೇಷನ್ ಸಿಂಧೂರ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ? ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವೆ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಶಿವಣ್ಣ, ಮಾಜಿ ಸಂಸದರಾದ ಎಲ್.ಹನುಮಂತಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.