×
Ad

ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ | ಕೌನ್ಸಿಲಿಂಗ್ ಮೂಲಕ 1,300 ನೌಕರರ ವರ್ಗಾವಣೆ : ಪ್ರಿಯಾಂಕ್ ಖರ್ಗೆ

Update: 2025-07-31 18:18 IST

 ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2024-25ನೆ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 2697 ನೌಕರರಿಂದ ವರ್ಗಾವಣೆಗಾಗಿ ಅರ್ಜಿಗಳು ಸ್ವೀಕೃತವಾಗಿದ್ದವು. ಇವುಗಳಲ್ಲಿ ನೌಕರರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಹೊಂದಿದ 1,300 ನೌಕರರಿಗೆ ಆನ್ ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ಹೊರಡಿಸಿ ಸ್ಥಳದಲ್ಲೆ ನೌಕರರಿಗೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊದಲ ಸುತ್ತು ಹಾಗೂ ದ್ವಿತೀಯ ಸುತ್ತಿನಲ್ಲಿ ವಿಶೇಷ ಪ್ರಕರಣಗಳಾದ ಗಂಭೀರ ಅನಾರೋಗ್ಯ, ವಿಶೇಷ ಚೇತನರು ಹಾಗೂ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆ ಕೌನ್ಸ್ಸಿಲಿಂಗ್ ಅನ್ನು ಜು.25ರಂದು ನಡೆಸಿ 161 ನೌಕರರಿಗೆ ಹಾಗೂ ಎರಡನೆಯ ಹಂತದಲ್ಲಿ ಸಾಮಾನ್ಯ ಕೋರಿಕೆ ಪ್ರಕರಣಗಳ 619 ನೌಕರರಿಗೆ ಜು.28ರಂದು ಹಾಗೂ ಕೊನೆಯ ಹಂತದಲ್ಲಿ ಕಡ್ಡಾಯ ವರ್ಗಾವಣೆ ಕೌನ್ಸ್ಸಿಲಿಂಗ್ ಅನ್ನು ಜು.29 ಮತ್ತು 30ರಂದು ಕೈಗೊಂಡು 520 ನೌಕರರಿಗೆ ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ನೀಡಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೊದಲ ಬಾರಿಗೆ ವರ್ಗಾವಣೆ ಪ್ರಕ್ರಿಯೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಯಶಸ್ವಿಯಾಗಿ ನಡೆಸಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಜೊತೆಗೆ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ ಎಂದು ಅವರು ತಿಳಿಸಿದ್ದಾರೆ.

ಅಂತರಜಿಲ್ಲೆ ವರ್ಗಾವಣೆಗೆ ಅರ್ಹರಿದ್ದ 7 ನೌಕರರ ಪೈಕಿ ಐವರು ನೌಕರರಿಗೆ ವರ್ಗಾವಣೆ ಆದೇಶ ನೀಡುವ ಮೂಲಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಜು.22ರಂದು ಆನ್ ಲೈನ್ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು ಎಂದು ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News