×
Ad

Vijayanagara | ʼಎಫ್‌ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖʼ : ಕೊಟ್ಟೂರಿನ ತ್ರಿವಳಿ ಕೊಲೆ ಪ್ರಕರಣದ ಬಗ್ಗೆ ಎಸ್‌ಪಿ ಹೇಳಿದ್ದೇನು ?

Update: 2026-01-31 17:13 IST

ವಿಜಯನಗರ : ಕೊಟ್ಟೂರು ಪಟ್ಟಣದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಅವರು ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ವಿವರಗಳಿಗೆ ಪ್ರತಿಕ್ರಿಯಿಸದ ಅವರು, ಆರೋಪಿ ಅಕ್ಷಯ್ ಕುಮಾರ್ ತನ್ನ ತಂದೆ, ತಾಯಿ ಹಾಗೂ ತಂಗಿ ನಾಪತ್ತೆಯಾಗಿದ್ದಾರೆ ಎಂದು ಆರಂಭದಲ್ಲಿ ದೂರು ನೀಡಿದ್ದನು. ಆದರೆ ಆತನ ವರ್ತನೆಯಲ್ಲಿ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ತಿಲಕ್‌ನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ಮೂವರನ್ನೂ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಶನಿವಾರ ಆರೋಪಿಯನ್ನು ಕೊಟ್ಟೂರಿಗೆ ಕರೆತಂದು ಮಹಜರು ನಡೆಸಿ, ಮನೆಯೊಳಗೆ ಹೂತಿಟ್ಟಿದ್ದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ವಿವರಿಸಿದರು.

ಸದ್ಯ ಈ ಪ್ರಕರಣದ ತನಿಖೆಯನ್ನು ತಿಲಕ್‌ನಗರ ಪೊಲೀಸ್ ಠಾಣೆಯವರೇ ನಡೆಸುತ್ತಿದ್ದಾರೆ. ಅವರು ಪ್ರಕರಣವನ್ನು ಅಧಿಕೃತವಾಗಿ ಹಸ್ತಾಂತರಿಸಿದ ನಂತರ ವಿಜಯನಗರ ಪೊಲೀಸರು ಮುಂದಿನ ತನಿಖೆ ಆರಂಭಿಸಲಿದ್ದಾರೆ ಎಂದು ಎಸ್‌ಪಿ ಜಾಹ್ನವಿ ಸ್ಪಷ್ಟಪಡಿಸಿದರು.

‘ಕೊಲೆ ಯಾವಾಗ ನಡೆದಿದೆ, ಹೇಗೆ ನಡೆದಿದೆ, ಕೊಲೆಯ ಉದ್ದೇಶ ಹಾಗೂ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಈ ಎಲ್ಲಾ ಅಂಶಗಳ ಕುರಿತು ಸದ್ಯ ತನಿಖೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News