×
Ad

ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ : ಸಲೀಂ ಅಹ್ಮದ್

Update: 2025-07-13 17:42 IST

ಬೆಂಗಳೂರು: ಮುಂದಿನ ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವುದು ಮಾತ್ರವಲ್ಲದೆ, ಸಚಿವ ಸ್ಥಾನ ಕಳೆದುಕೊಂಡವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನೀಡಲಾಗುತ್ತದೆ ಎಂದು ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.

ರವಿವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರು ಸೇರಿದಂತೆ ಹಲವು ಕಮಿಟಿಗಳೆಲ್ಲಾ ಸೇರಿ ಕಾಂಗ್ರೆಸ್ ಹೈಕಮಾಂಡ್ ಆಗಿರುತ್ತದೆ. ನಮ್ಮದು ಬಿಜೆಪಿ ರೀತಿಯ ಪ್ರಧಾನಿ ನರೇಂದ್ರ ಮೋದಿ ಪಕ್ಷವಲ್ಲ, ಪ್ರಜಾಪ್ರಭುತ್ವ ಇರುವ ಪಕ್ಷವಾಗಿದೆ. ಇಲ್ಲಿ ಚರ್ಚೆ, ವಿಶ್ಲೇಷಣೆ ಮಾಡಲಾಗುತ್ತದೆ ಎಂದರು.

ಸಚಿವ ಕೆ.ಎನ್.ರಾಜಣ್ಣ ಹೇಳಿದ್ದ ಕ್ರಾಂತಿ ಯಾವುದು ಎಂದರೆ ಬಿಜೆಪಿಯಲ್ಲಿ 75 ವರ್ಷ ವಯಸ್ಸಾದವರು ಅಧಿಕಾರ ತ್ಯಜಿಸಬೇಕು ಎಂಬುದು. ನಮ್ಮಲ್ಲಿ ಇರುವುದು ಶಾಂತಿ, ಬಿಜೆಪಿಯಲ್ಲಿರುವುದು ಕ್ರಾಂತಿ ಎಂದು ವಿಶ್ಲೇಷಣೆ ಮಾಡಿದ ಅವರು, ಕೇಂದ್ರ ಸರಕಾರ ನಮ್ಮ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೊಡಿಸಲು ಕೇಂದ್ರದ ಐದು ಮಂತ್ರಿಗಳು ಮತ್ತು ಸಂಸದರು ವಿಫಲವಾಗಿದ್ದಾರೆ ಎಂದು ಟೀಕಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 11 ವರ್ಷವಾಯಿತು. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಅಧಿಕಾರ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ಆಡಳಿತದಿಂದ ಜನರು ಭ್ರಮನಿರಸನರಾಗಿದ್ದಾರೆ.ಅಷ್ಟೇ ಮಾತ್ರವಲ್ಲದೆ, ಕೇಂದ್ರ ಸರಕಾರ ಹೇಳಿದ್ದೇ ಒಂದು, ಮಾಡುತ್ತಿರುವುದೇ ಒಂದು. ಆದರೆ ಕರ್ನಾಟಕದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ನಮ್ಮ ಏಳಿಗೆಯನ್ನು ಬಿಜೆಪಿಯವರು ಸಹಿಸುತ್ತಿಲ್ಲ. ಅಗಸ್ಟ್ ತಿಂಗಳಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತದೆ. ಅಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದ ಅವರು, ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News