×
Ad

ನವೆಂಬರ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆ ಸಾಧ್ಯತೆ : ಸಲೀಂ ಅಹ್ಮದ್

Update: 2025-09-22 20:37 IST

ಹೊಸದಿಲ್ಲಿ, ಸೆ.22: ರಾಜ್ಯ ಸರಕಾರ ನವೆಂಬರ್ ತಿಂಗಳಲ್ಲಿ ಎರಡೂವರೆ ವರ್ಷ ಪೂರ್ಣಗೊಳಿಸಲಿದೆ. ಆದುದರಿಂದ, ಶೇ.50ರಷ್ಟು ಸಚಿವರಿಗೆ ಪಕ್ಷದ ಜವಾಬ್ದಾರಿ ಕೊಟ್ಟು, ಹೊಸಬರಿಗೆ ಅವಕಾಶ ನೀಡುವಂತೆ ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ ಎಂದು ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಹಾಗೂ ಸರಕಾರದ ಹಿತದೃಷ್ಟಿಯಿಂದ ನವೆಂಬರ್‌ನಲ್ಲಿ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದೆ. 2023ರಲ್ಲಿ ನಾಲ್ವರು ಕೆಪಿಸಿಸಿ ಕಾರ್ಯಾಧ್ಯಕ್ಷರ ಪೈಕಿ ಮೂವರಿಗೆ ಸಚಿವ ಸ್ಥಾನ ಸಿಕ್ಕಿತು. ನನಗೆ ಅವಕಾಶ ಕೈ ತಪ್ಪಿ ಅನ್ಯಾಯವಾಯಿತು ಎಂದು ಹೇಳಿದರು.

ಮುಖ್ಯಮಂತ್ರಿ, ಪಕ್ಷದ ವರಿಷ್ಠರು, ಹೈಕಮಾಂಡ್ ನನಗೆ ಸಂಪುಟ ಪುನರ್ ರಚನೆ ವೇಳೆ ಅವಕಾಶ ಕಲ್ಪಿಸುವ ವಿಶ್ವಾಸವಿದೆ. ನಾನು ಪ್ರತಿನಿಧಿಸುವ ಕಿತ್ತೂರು ಕರ್ನಾಟಕ ಭಾಗದಲ್ಲಿ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳು ಬರುತ್ತವೆ. 2004ರಲ್ಲಿ ಜಬ್ಬಾರ್ ಖಾನ್ ಹೊನ್ನಾಳಿ ಬಳಿಕ 20 ವರ್ಷಗಳಾದರೂ ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕರ್ನಾಟಕ ಜಿಲ್ಲೆಯಿಂದ ಅಲ್ಪಸಂಖ್ಯಾತರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಅವರು ಹೇಳಿದರು.

ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆಯಿದೆಯೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ನಾನು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಮುಖ್ಯಮಂತ್ರಿ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News