×
Ad

ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆ ಅನ್ವಯ ನೇಮಕಾತಿ ಮುಂದುವರಿಸಲು ಸರಕಾರಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

Update: 2025-11-27 19:10 IST

ಬೆಂಗಳೂರು : ರಾಜ್ಯದಲ್ಲಿ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022'ರ ಅನ್ವಯ ಈಗಾಗಲೇ ಆರಂಭಿಸಿರುವ ಸರಕಾರಿ ಹುದ್ದೆಗಳ ನೇಮಕಾತಿ‌ ಮತ್ತು ಬಡ್ತಿ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಇದರಿಂದ, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಸಾವಿರಾರು ಹುದ್ದೆಗಳ ಪೈಕಿ 3,644 ಹುದ್ದೆಗಳ ನೇಮಕಾತಿ‌ಗಿದ್ದ ಅಡ್ಡಿ ಸದ್ಯಕ್ಕೆ ನಿವಾರಣೆಯಾದಂತಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ, ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ. 50ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಆಕ್ಷೇಪಿಸಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಯಾವುದೇ ನೇಮಕಾತಿ ಅಥವಾ ಬಡ್ತಿ ನೀಡುವಂತಿಲ್ಲ. ಕಾಯ್ದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿ ಅಥವಾ ಸೀಟುಗಳ ಹಂಚಿಕೆಯು ಹಾಲಿ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಇದನ್ನು ನೇಮಕಾತಿ ಅಥವಾ ಬಡ್ತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ದೊರೆಯುವುದಿಲ್ಲ. ಈ ಮಾರ್ಪಾಡು 2025ರ ನವೆಂಬರ್ 19ರ ಮಧ್ಯಂತರ ಆದೇಶಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶಿಸಿತು.

ಸರಕಾರದ ವಾದವೇನು?

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಕಾಯ್ದೆ ಅನ್ವಯ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನೇಮಕಾತಿ ಆರಂಭಿಸಿದ್ದು, ಅಂತಿಮ ಹಂತದಲ್ಲಿದೆ. ಒಟ್ಟು 3,644 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸುವುದಿಲ್ಲ. ಹೊಸ ಕಾಯ್ದೆ ಅಡಿ ಈಗಾಗಲೇ ನೇಮಕಾತಿ ಮಾಡಿರುವುದಕ್ಕೆ ಮಧ್ಯಂತರ ಆದೇಶ ಅನ್ವಯಿಸದೆಂದು ಆದೇಶಿಸಬೇಕು. ಅರ್ಜಿದಾರರು ಸರಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿಲ್ಲ. ಆದ್ದರಿಂದ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಮತ್ತು ಬಡ್ತಿ ನೀಡಲು ಸರಕಾರಕ್ಕೆ ಅನುಮತಿಸಬೇಕು ಎಂದು ಕೋರಿದರು.

ಅಭ್ಯರ್ಥಿ ಮಧು ಎಂಬುವರ ಪರ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್‌ ವಾದ ಮಂಡಿಸಿ, ನೇಮಕಾತಿ ಪ್ರಕ್ರಿಯೆ ನಡೆಯಲಿ. ಆದರೆ, ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸಬಾರದು. ಬಿಬಿಎಂಪಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿದ್ದೇವೆ. ಆಯ್ಕೆಯಾದ ಮೇಲೆ ನೇಮಕಾತಿ ಆದೇಶ ನೀಡಲು ಮೂರು ತಿಂಗಳಾಗುತ್ತದೆ. ಜಾತಿ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಿವೃತ್ತ ನ್ಯಾ. ಎಚ್‌ ಎನ್‌ ನಾಗಮೋಹನ್‌ ದಾಸ್‌ ಸಮಿತಿಯ ವರದಿ ಅನುಸಾರ ಮೀಸಲಾತಿ ಹೆಚ್ಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ನ್ಯಾ. ನಾಗಮೋಹನ್‌ ದಾಸ್‌ ಸಮಿತಿಯು ಅಗತ್ಯ ಪ್ರಾತಿನಿಧ್ಯ ಪರೀಕ್ಷೆ ಅನ್ವಯಿಸುವಲ್ಲಿ ಮೂಲಭೂತವಾಗಿ ಎಡವಿದೆ. ಅದು ಅನುಪಾತನ ಪ್ರಾತಿನಿಧ್ಯ ಕಲ್ಪಿಸಿದೆ ಎಂದು ಆಕ್ಷೇಪಿಸಿದರು.

ಅರ್ಜಿದಾರರ ಪರ ವಕೀಲರಾದ ನಚಿಕೇತ್‌ ಮತ್ತು ರಂಗನಾಥ್‌ ಜೋಯಿಷ್‌ ವಾದ ಮಂಡಿಸಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬಾರದು. ಅರ್ಜಿಗಳನ್ನು ಅಂತಿಮವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಾದಿಸಲು ಸಿದ್ಧರಾಗಿದ್ದು, ಅದಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಅಂತಿಮವಾಗಿ ನ್ಯಾಯಪೀಠ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲಿ ಷರತ್ತುಬದ್ಧ ಅನುಮತಿ ನೀಡಿತಲ್ಲದೆ, ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು 2026ರ ಜನವರಿ 28ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News