×
Ad

ಬೆಂಗಳೂರು ಕಾಲ್ತುಳಿತ ಪ್ರಕರಣ: ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲೆ ಎಸ್.ಸುಶೀಲಾ ನೇಮಕ

Update: 2025-06-23 23:15 IST

Photo credit: PTI

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ 11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣ ಸಂಬಂಧಿಸಿದಂತೆ ತನಿಖಾ ವರದಿ ಮುಚ್ಚಿದ ಲಕೋಟೆಯಲ್ಲಿರಿಸಬೇಕೇ, ಬೇಡವೇ ಎಂಬ ಬಗ್ಗೆ ಅಮಿಕಸ್ ಕ್ಯೂರಿ(ಕೋರ್ಟ್‌ಗೆ ನೆರವಾಗುವವರು) ನೇಮಕದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಪರ ವಕೀಲರ ಹಾಜರಿದ್ದರು.

ಹೈಕೋರ್ಟ್‌ಗೆ ತನಿಖಾ ಸ್ಥಿತಿ ವರದಿ ಮುಚ್ಚಿದ ಲಕೋಟೆಯಲ್ಲಿರಿಸಬೇಕೇ, ಬೇಡವೇ ಎಂಬ ಬಗ್ಗೆ ಅಮಿಕಸ್ ಕ್ಯೂರಿ ನೇಮಕದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ನೇಮಕ ಮಾಡಿದ ಪೀಠ, ಪಿಐಎಲ್ ಹಾಗೂ ಇತರ ದಾಖಲೆಗಳನ್ನು ಎಸ್.ಸುಶೀಲಾರಿಗೆ ನೀಡಲು ಸೂಚನೆ ನೀಡಲಾಯಿತು.

ಇದೇ ವೇಳೆ ಪರಿಹಾರದ ಹಣ ಹೆಚ್ಚಿಸಲು ಸಂತ್ರಸ್ತರಿಂದಲೂ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನು ಪ್ರತಿವಾದಿಗಳಿಗೆ ಸಲ್ಲಿಸಲು ಸೂಚನೆ ನೀಡಿದ ಪೀಠ ಜುಲೈ 1 ಕ್ಕೆ ವಿಚಾರಣೆ ಮಂದೂಡಿತು.

ಚಿನ್ನಸ್ವಾಮಿ ಕಾಲ್ತುಳಿತ ಘಟನೆ ಕುರಿತು ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಗೆ ವಕೀಲ ರಮೇಶ್ ನಾಯ್ಕ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಸರಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ ಮೃತಪಟ್ಟವರಿಗೆ 25 ಲಕ್ಷ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News