×
Ad

ನ್ಯಾಯಾಲಯದ ಆದೇಶದ ಹೊರತಾಗಿಯೂ ದರ್ಶನ್‌ಗೆ ಸೌಲಭ್ಯ ಕಲ್ಪಿಸದ ಆರೋಪ: ಜೈಲು ಅಧಿಕಾರಿಗಳಿಂದ ವಿವರಣೆ ಕೇಳಿದ ಸೆಷನ್ಸ್ ಕೋರ್ಟ್

Update: 2025-09-15 21:28 IST

ನಟ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪದ ಕುರಿತು ವಿವರಣೆ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್‌ ಸಲ್ಲಿಸಿರುವ ಮೆಮೋ ಕುರಿತು ವಿಚಾರಣೆ ನಡೆಸಿದ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಐ.ಪಿ. ನಾಯ್ಕ್‌ ಅವರು, ಅರ್ಜಿದಾರರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 17 ಅಥವಾ ಅದಕ್ಕಿಂತ ಮುಂಚಿತವಾಗಿ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದರು.

ಪ್ರಕರಣವೇನು?

ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ಒದಗಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಪರಿಗಣಿಸದ ಹಿನ್ನೆಲೆಯಲ್ಲಿ ದರ್ಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಾಲಯ, ಕರ್ನಾಟಕ ಕಾರಾಗೃಹಗಳ ಕೈಪಿಡಿಯ ಅನುಸಾರ ದರ್ಶನ್‌ ಗೆ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿತ್ತು.

ಇದೀಗ ಮೆಮೊ ಸಲ್ಲಿಸಿರುವ ದರ್ಶನ್‌, ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ. ಇದರಿಂದ, ನ್ಯಾಯಾಲಯದ ಆದೇಶದ ಪೂರ್ವ ಮತ್ತು ನಂತರ ಪರಿಸ್ಥಿತಿ ಏನೂ ಬದಲಾಗಿಲ್ಲ. ತಮ್ಮ ವಕೀಲರು ಜೈಲು ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಾಲಯದ ಆದೇಶದ ಪ್ರತಿ ಸಲ್ಲಿಸಿದರು. ತೀರ್ಪಿನ ಅಂಶಗಳನ್ನು ಅರ್ಥಮಾಡಿಸಲು ಯತ್ನಿಸಿದರು. ಆದರೆ, ಜೈಲು ಅಧಿಕಾರಿಗಳು ಮಾತ್ರ, ತಮಗೆ ನ್ಯಾಯಾಲಯ ಆದೇಶ ತಲುಪಿದೆ. ಆದೇಶದ ಅನುಸಾರ ಏನು ಮಾಡಬೇಕೋ; ಅದನ್ನು ಮಾಡುತ್ತೇವೆ. ಅದನ್ನು ನೀವು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ನ್ಯಾಯಾಲಯದ ಆದೇಶ ಪಾಲಿಸದ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಶಿಫಾರಸು ಮಾಡಬೇಕು ಎಂದು ದರ್ಶನ್‌ ಮೆಮೊನಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News