×
Ad

ಸಿದ್ದರಾಮಯ್ಯ ಆಡಳಿತಾವಧಿ ರಾಜ್ಯಕ್ಕೆ ಹೆಮ್ಮೆ: ಯು.ಟಿ. ಖಾದರ್

ಅರಸು–ಸಿದ್ದರಾಮಯ್ಯ ರಾಜಕೀಯ ಪರಂಪರೆಯನ್ನು ಸ್ಮರಿಸಿ ಮುಖ್ಯಮಂತ್ರಿಗಳಿಗೆ ಅಭಿನಂದನೆ

Update: 2026-01-06 14:22 IST

ಬೆಂಗಳೂರು: ನನ್ನ ತಂದೆ ಯು.ಟಿ. ಫರೀದ್ ಅವರು ದೇವರಾಜ್ ಅರಸು ಅವರು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಶಾಸಕರಾಗಿ ಕೆಲಸ ಮಾಡಿದ್ದರು. ಇದೀಗ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ, ಅವರ ಜೊತೆಯಲ್ಲಿ ನಾನು ಉನ್ನತ ಜವಾಬ್ದಾರಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ತುಂಬು ಹೃದಯದ ಶುಭಾಶಯಗಳನ್ನು ಸಲ್ಲಿಸಿದರು. “ರಾಜ್ಯದ ರಾಜಕೀಯದಲ್ಲಿ ನೀವು ಒಂದು ಕಾಲಘಟ್ಟವನ್ನೇ ಸ್ಥಾಪಿಸಿದ್ದೀರಿ. ಜನರು ಗರ್ವದಿಂದ ‘ಸಿದ್ದರಾಮಯ್ಯನವರ ಕಾಲ’ ಎಂದು ಹೇಳಿಕೊಳ್ಳುವಂತಹ ಆಡಳಿತಾವಧಿಯನ್ನು ನೀವು ರಾಜ್ಯಕ್ಕೆ ನೀಡಿದ್ದೀರಿ. ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎನ್ನುವುದು ನಮಗೂ ಹೆಮ್ಮೆಯ ವಿಷಯವಾಗಿದೆ,” ಎಂದು ಹೇಳಿದರು.

ಹಿಂದೆ ದೇವರಾಜ್ ಅರಸು ಅವರು ದಾಖಲೆಯ ಆಡಳಿತಾವಧಿ ನಡೆಸಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರು ಅವರೊಂದಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇಂದು ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ಖಾದರ್ ಹೇಳಿದರು.

“ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ವ ನೀಡಿದ್ದೀರಿ. ನೀವು ಹಿಡಿದಿರುವ ಸಮಾನತೆಯ ಹಾದಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಶೋಷಿತರು, ಪೀಡಿತರು ಹಾಗೂ ದಮನಿತರ ಪರ ನಿಮ್ಮ ಧ್ವನಿಗೆ ನಾವು ಧ್ವನಿಗೂಡಿಸುತ್ತೇವೆ. ಈ ಸುಸಂದರ್ಭದಲ್ಲಿ ಸಮಾನತೆಯ ಸಮಾಜ ನಿರ್ಮಾಣದ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸೋಣ.” ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News