×
Ad

ವಿಬಿ-ಜಿ ರಾಮ್ ಜಿ ಕಾಯ್ದೆ | ರಾಜ್ಯ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುವ ಅನ್ಯಾಯದ ಬಗ್ಗೆ 2 ದಿನಗಳ‌ ವಿಶೇಷ ಅಧಿವೇಶನ : ಡಿ.ಕೆ.ಶಿವಕುಮಾರ್

Update: 2026-01-08 22:30 IST

ಬೆಂಗಳೂರು: "ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ರಾಜ್ಯಗಳಿಗೆ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಲು 2 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

"ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿ, ವಿಬಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಇಂದು ಶಾಸಕರು, ಸಂಸದರ ಸಭೆ ನಡೆಸಲಾಗಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು, ಮನರೇಗಾ ವಾಪಸ್ ತರಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ" ಎಂದು ತಿಳಿಸಿದರು.

"ಸದ್ಯದಲ್ಲೇ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಹಾಗೂ ಬೂತ್ ಅಧ್ಯಕ್ಷರ ಸಭೆ ಕರೆಯಲಾಗುವುದು. ಕೇಂದ್ರ ಸರ್ಕಾರದ ಈ ಕಾನೂನು ದೇಶಕ್ಕೆ ಬಹು ದೊಡ್ಡ ಮಾರಕವಾಗಿದ್ದು, ಇದನ್ನು ತೆಗೆದುಹಾಕಿ, ಮನರೇಗಾ ಪುನಃ ಸ್ಥಾಪನೆಗೆ ಬೃಹತ್ ಹೋರಾಟ ನಡೆಸಲಾಗುವುದು. ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಜ. 26 ರಿಂದ ಫೆ. 2ರವರೆಗೆ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಉದ್ಯೋಗ ಕಾರ್ಡ್ ಹೊಂದಿರುವ ಕಾರ್ಮಿಕರ ಜತೆ ಈ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.

"ಮೂರು ದಿನ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಾಗುವುದು. ಪ್ರತಿ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಮನರೇಗಾ ಬದಲಾವಣೆ ಮೂಲಕ 6000 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ನಮ್ಮ ರಾಜ್ಯದಿಂದ ಕಸಿದುಕೊಳ್ಳಲಾಗಿದೆ" ಎಂದರು.

"ಇಷ್ಟು ದಿನ ಪಂಚಾಯ್ತಿಗಳು ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುತ್ತಿದ್ದವು. ಈಗ ದೆಹಲಿಯಿಂದ ನಿರ್ದೇಶನ ಮಾಡಿದ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಈ ಬದಲಾವಣೆ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸಬೇಕಿತ್ತು. ಈ ಬದಲಾವಣೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗ ಹಕ್ಕು ಕಸಿಯಲಾಗಿದೆ. ಸಂವಿಧಾನದ 73, 74ನೇ ತಿದ್ದುಪಡಿ ಪ್ರಕಾರದ ಹಕ್ಕನ್ನು ಕಸಿಯಲಾಗಿದೆ " ಎಂದು ಆಗ್ರಹಿಸಿದರು.

"ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಒಂದು ವಾರದಲ್ಲಿ ಕೂಲಿ ಕೊಡುವ ಶಕ್ತಿ ಇತ್ತು. ಇದನ್ನೆಲ್ಲಾ ಮುಗಿಸಿ ಹೊಸ ರೂಪದಲ್ಲಿ ಅನ್ಯಾಯ ಮಾಡಿದ್ದಾರೆ. ಮನರೇಗಾದಲ್ಲಿ 90% ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ 60% ಕೇಂದ್ರ ಸರ್ಕಾರ, 40% ರಾಜ್ಯ ಸರ್ಕಾರ ಕೊಡಬೇಕು ಎಂದು ಬದಲಾವಣೆ ತಂದಿದ್ದಾರೆ. ಇದು ಒಕ್ಕೂಟ ವ್ಯವಸ್ಥೆ ವಿಚಾರವಾಗಿದ್ದು, ಈ ವಿಚಾರಗಳನ್ನ ರಾಜ್ಯಗಳ ಜೊತೆ ಚರ್ಚೆ ಮಾಡಬೇಕಿತ್ತು. ಇದನ್ನೆಲ್ಲಾ ಬಿಟ್ಟು ರಾತ್ರೊ, ರಾತ್ರಿ ಏಕಾಏಕಿಯಾಗಿ ಬದಲಾವಣೆ ಮಾಡಿದ್ದಾರೆ" ಎಂದು ಹೇಳಿದರು.

ಬಳ್ಳಾರಿ ಘಟನೆ ಬಗ್ಗೆ ಸಮಿತಿ ವರದಿ ಕೊಟ್ಟಿದೆ:  

ಬಳ್ಳಾರಿ ಗಲಭೆ ಬಗ್ಗೆ ಕೇಳಿದಾಗ, "ಬಳ್ಳಾರಿ ಘಟನೆ ಬಗ್ಗೆ ಸಮಿತಿ ವರದಿ ಕೊಟ್ಟಿದೆ. ವರದಿ ನೋಡಿದ ಬಳಿಕ ಮಾಹಿತಿ ಕೊಡುತ್ತೇನೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News