×
Ad

ಕಸಾಪದ ಕುರಿತು ವಾಸ್ತವಾಂಶ ವರದಿ ಸಲ್ಲಿಸುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ

Update: 2026-01-08 21:01 IST

ಥಾವರ್‌ಚಂದ್ ಗೆಹ್ಲೋಟ್ PC : PTI

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಮಹೇಶ್ ಜೋಶಿ ಡಿ.31ರಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ತಿಳಿಸಿದ್ದಾರೆ. ಆದ್ದರಿಂದ ಕಸಾಪದ ಕುರಿತು ವಾಸ್ತವಾಂಶ ವರದಿ ಸಲ್ಲಿಸುವಂತೆ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರ ಸಚಿವಾಲಯ ತಿಳಿಸಿದೆ.

ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪತ್ರ ಬರೆದಿದ್ದು, ಮಹೇಶ್ ಜೋಶಿ ಹಾಗೂ ಕಸಾಪದ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1960ರ ಕಲಂ 25ರ ಅಡಿಯಲ್ಲಿ ವಿಚಾರಣೆ ನಡೆಸುತ್ತಿರುವ ವಿಚಾರಣಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರವು, ರಾಜಕೀಯ ಪ್ರೇರಿತ ಮತ್ತು ಪ್ರಭಾವಿ ದೂರುದಾರರ ಒತ್ತಡದಿಂದಾಗಿ ಈ ವಿಷಯದಲ್ಲಿ ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಹೇಶ್ ಜೋಶಿ ಅವರು ಆರೋಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಎಚ್.ಪಿ.ನಾಗರಾಜಯ್ಯ ಅವರ ಪ್ರಕರಣದಲ್ಲಿ ಮಾಡಿದಂತೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ಸಮಿತಿಯಿಂದ ವಿಚಾರಣೆಯನ್ನು ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ. ರಾಜ್ಯಪಾಲರ ನಿರ್ದೇಶನದ ಮೇರೆಗೆ ಸದರಿ ಅರ್ಜಿಯ ಬಗ್ಗೆ ವರದಿ ಕೋರಲು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡುತ್ತಿದ್ದೇನೆ. ಆದ್ದರಿಂದ, ಪರಿಶೀಲಿಸಿ, ಶೀಘ್ರವಾಗಿ ವಾಸ್ತವಾಂಶದ ವರದಿಯನ್ನು ಸಲ್ಲಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News