‘ಎಸ್‍ಐಆರ್ ಪ್ರಕ್ರಿಯೆ’ ಒಂದು ವರ್ಷಕ್ಕೆ ವಿಸ್ತರಿಸಲು ಸಿಎಂಗೆ ಮನವಿ
ಬೆಂಗಳೂರು : ರಾಜ್ಯದಲ್ಲಿನ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮಾಡಬೇಕೆಂಬ ಯಾವ ಅಗತ್ಯವೂ ಇಲ್ಲ. ಎಸ್‍ಐಆರ್‌ನ ಗಣತಿ ನಮೂನೆ ಪ್ರಕ್ರಿಯೆಯನ್ನು ಮೂರು ತಿಂಗಳ ಕಾಲ ವಿಸ್ತರಿಸಬೇಕು ಮತ್ತು ಇಡೀ ಪ್ರಕ್ರಿಯೆಗೆ ಒಂದು ವರ್ಷದ ಅವಧಿ ಇಟ್ಟುಕೊಂಡು, ವ್ಯವಧಾನದಿಂದ ನಡೆಸಲು ಸರಕಾರ, ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು ಎಂದು ವಿವಿಧ ನಾಗರಿಕ ಸಂಘಟನೆಗಳ ಮುಖಂಡರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಸಿಎಂ ಕೊಠಡಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಹುಭಾಷಾ ನಟ ಪ್ರಕಾಶ್‍ರಾಜ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಎದ್ದೇಳು ಕರ್ನಾಟಕದ ನೂರ್ ಶ್ರೀಧರ್, ತಾರಾ ರಾವ್, ಕರ್ನಾಟಕ ಮುಸ್ಲಿಮ್ ಮುತ್ತಹಿದ ಮಹಾಜ್‍ನ ಮುಹಮ್ಮದ್ ಯೂಸುಫ್ ಕನ್ನಿ, ತಫೀಮುಲ್ಲ ಮಾರುಫ್, ಆಶೀರ್ವಾದ್‍ನ ಫಾ.ಅರುಣ್ ಲೂಯಿಸ್, ನನ್ನ ಮತ ನನ್ನ ಹಕ್ಕು ತಂಡದ ವಿನಯ್ ಶ್ರೀನಿವಾಸ್, ನಾಗರಿಕ ಮತಕಾವಲು ಸಮಿತಿಯ ಕೆ.ಎಲ್. ಅಶೋಕ್, ಮ್ಯಾಂಡೇಟ್ ಅನಲೈಟಿಕ್ ಅಂಡ್ ಕನ್ಸಲ್ಟಿಂಗ್‍ನ ಸೈಯದ್ ತೌಸಿಫ್ ಮಸೂದ್, ಮುಹಮ್ಮದ್ ಇಸ್ಮಾಯಿಲ್, ಪತ್ರಕರ್ತ ಸುನೀಲ್ ಶಿರಸಂಗಿ ಮನವಿ ಪತ್ರ ಸಲ್ಲಿಸುವ ಮೂಲಕ ಎಸ್‍ಐಆರ್‌ನಲ್ಲಿನ ಲೋಪ-ದೋಷಗಳ ಕುರಿತು ಸಮಾಲೋಚನೆ ನಡೆಸಿದರು.
‘ದೇಶದಲ್ಲೇ ಕರ್ನಾಟಕದಲ್ಲಿ ಅತಿಹೆಚ್ಚಿನ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತೊಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 1.09 ಕೋಟಿ ಮತದಾರರು ಎಎಸ್‍ಡಿಡಿಒ ಪಟ್ಟಿಯಲ್ಲಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಪ್ರಮಾಣದ ಹೆಸರುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು ಮೂರು ಸಾವಿರ ಬೂತ್‍ಗಳಲ್ಲಿ ಡಿಲೀಷನ್ ಪ್ರಮಾಣ ಶೇ.60ಕ್ಕಿಂತ ಹೆಚ್ಚಿದೆ’ ಎಂದು ಅವರು ವಿವರಿಸಿದರು.
‘ಇಂತಹದೊಂದು ಅಘಾತಕಾರಿ ಅನ್ಯಾಯ ಕರ್ನಾಟಕದಲ್ಲಿ ನಡೆಯಲು ಅವಕಾಶ ನೀಡಬಾರದು. ಈ ಅವೈಜ್ಞಾನಿಕ, ಅಸಂವಿಧಾನಿಕ, ಅವ್ಯವಸ್ಥಿತ ವಿಧಾನದಿಂದಾಗಿ ಅತಿಹೆಚ್ಚು ಮತಹಕ್ಕು ಕಳೆದುಕೊಳ್ಳುತ್ತಿರುವ ಜನರೆಂದರೆ ಸ್ವಂತದ ಸೂರಿಲ್ಲದ ಬಡ ಹಾಗೂ ಮಧ್ಯಮ ವರ್ಗದ ಜನರು, ದುಡಿಯಲು ಅಲೆದಾಡುತ್ತಿರುವ ತಳ ವರ್ಗದವರು ಹಾಗೂ ವಿವಾಹಿತ ಮಹಿಳೆಯರು. ಇವರೆಲ್ಲರ ರಕ್ಷಣೆ, ನಿಮ್ಮ ಹೊಣೆ. ರಾಜ್ಯದ ಜನಹಿತವನ್ನು ರಕ್ಷಿಸಿಕೊಳ್ಳಲು ರಾಜ್ಯ ಸರಕಾರ ಕೆಲವು ಮುಖ್ಯ ಕ್ರಮಗಳಿಗೆ ಮುಂದಾಗಬೇಕು’ ಎಂದು ಹೋರಾಟಗಾರರು ಒತ್ತಾಯಿಸಿದರು.
‘ಸ್ಥಳಾಂತರ, ಗೈರು ಮತ್ತು ಇತರೆ(ಅದರ್ಸ್)’ ವರ್ಗದಲ್ಲಿರುವ ಜನರನ್ನು ಕೂಡಲೇ ಡಿಲೀಟೆಡ್ ಎಂದು ಘೋಷಿಸಬಾರದು. ಬಿಎಲ್‍ಒಗಳು ಮತ್ತೊಮ್ಮೆ ಮನೆಮನೆಗೆ ಹೋಗಿ ಎಲ್ಲ ಬೂತುಗಳಲ್ಲಿಯೂ ಸ್ಥಳಾಂತರಗೊಂಡು ಬಂದು ನೆಲೆಸಿರುವ ಜನರಿಗೆ ಗಣತಿ ನಮೂನೆ ಮತ್ತು ನಮೂನೆ-8ನ್ನು ನೀಡಿ, ಅವರ ಮತದ ವರ್ಗಾವಣೆಗೆ ಅವಕಾಶ ನೀಡಲಿ. ಹಾಗೆಯೇ ಹೊಸ ಮತದಾರರಿಗೆ ನಮೂನೆ-6 ಕೊಟ್ಟು ನೋಂದಾವಣಿ ಮಾಡಿಕೊಳ್ಳುವ ಪ್ರಕ್ರಿಯೆಯೂ ಜೊತೆಗೆ ನಡೆಯಲಿ. ‘ಗೈರು ಮತ್ತು ಇತರೆ’ ವರ್ಗದಲ್ಲಿರುವರನ್ನು ಸಂಪರ್ಕಿಸಿ, ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ, ಹೆಚ್ಚಿನ ಜನ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡಲು ಕ್ರಮವಹಿಸಲಿ’ ಎಂದು ವಿವರಿಸಿದರು.
‘ಜನರನ್ನು ಮತದಾರರ ಪಟ್ಟಿಯಲ್ಲಿ ಒಳಗೊಳ್ಳಲು ಅಗತ್ಯವಿರುವ ವ್ಯಾಪಕ ಪ್ರಚಾರ ಚುನಾವಣಾ ಆಯೋಗದಿಂದ ನಡೆಯಲಿ. ಅಲ್ಲಿಂದ ಸಾಧ್ಯವಾಗದಿದ್ದರೆ, ರಾಜ್ಯ ಸರಕಾರವೇ ಈ ಜವಬ್ದಾರಿಯನ್ನು ಕೈಗೆತ್ತಿಕೊಂಡು ಪ್ರಕಟಣೆಗಳನ್ನು ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ತೀರ್ಮಾನ ತೆಗೆದುಕೊಳ್ಳಲಿ. ಸರಕಾರಿ ಸಿಬ್ಬಂಧಿಯೂ ಮನೆಮನೆಗೆ ಹೋಗಿ ಜನರಿಗೆ ಮಾಹಿತಿ ನೀಡಿ, ಸಹಾಯ ಕೇಂದ್ರಗಳನ್ನು ಮಾಡಿ ಜನರಿಗೆ ನೆರವಾಗಲಿ’ ಎಂದು ಅವರು ಒತ್ತಾಯಿಸಿದರು.
‘ಚುನಾವಣಾ ಆಯೋಗ ಮೇಲಿನ ಕ್ರಮಗಳಿಗೆ ಒಪ್ಪದಿದ್ದಲ್ಲಿ ಸದನದಲ್ಲಿ ಈ ಕುರಿತು ಚರ್ಚೆ ನಡೆದು, ಇಡೀ ಸರಕಾರವೇ ಠರಾವನ್ನು ತೆಗೆದುಕೊಂಡು ಕೇಂದ್ರ ಚುನಾವಣಾ ಆಯೋಗಕ್ಕೆ ಒತ್ತಾಯಿಸಲಿ. ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಬಾಗಿಲುಗಳನ್ನೂ ತಟ್ಟಿ ರಾಜ್ಯದ ಹಿತ ಕಾಯಲು ಮುಂದಾಗಲಿ. ಕರ್ನಾಟಕದ ಪ್ರತಿಯೊಬ್ಬ ಅರ್ಹ ಮತದಾರರೂ ಘನತೆಯುತವಾಗಿ ಮತದಾರರ ಪಟ್ಟಿಯಲ್ಲಿ ಒಳಗೊಳ್ಳದೇ ಹೋದರೆ, ಲಕ್ಷಾಂತರ ಅರ್ಹ ಮತದಾರರ ಹಕ್ಕನ್ನು ಕಸಿದುಕೊಂಡರೆ, ಅಂತಹ ಅನ್ಯಾಯಯುತವಾದ ಮತದಾರರ ಪಟ್ಟಿಯನ್ನು ಕರ್ನಾಟಕ ಒಪ್ಪುವುದಿಲ್ಲ’ ಎಂಬ ಸಂದೇಶ ಕೇಂದ್ರಕ್ಕೂ ರವಾನೆಯಾಗಲಿ ಎಂದು ಹೋರಾಟಗಾರರು ತಿಳಿಸಿದರು.