ರಾಜ್ಯದಲ್ಲಿ 28,985 ಇಂಜಿನಿಯರಿಂಗ್ ಸೀಟುಗಳು ಖಾಲಿ : ಸಚಿವ ಬಸವರಾಜ ರಾಯರೆಡ್ಡಿ
ಬೆಂಗಳೂರು : 2025-26ನೇ ಸಾಲಿನಲ್ಲಿ ಸರಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,16,866 ಸೀಟುಗಳು ಲಭ್ಯವಿದ್ದು, ಖಾಸಗಿ ವಿವಿಗಳನ್ನು ಹೊರತುಪಡಿಸಿ 87,881 ಸೀಟುಗಳು ಭರ್ತಿಯಾಗಿವೆ. ಇನ್ನೂ 28,985 ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿವರಿಸಿದ್ದಾರೆ.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‍ನ ಬಸನಗೌಡ ಬಾದರ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಕರ್ನಾಟಕದಲ್ಲಿ ಸರಕಾರದ 17 ಹಾಗೂ ಖಾಸಗಿ ವಲಯದ 205 ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯಾಚರಿಸುತ್ತಿವೆ. ರಾಜ್ಯದಲ್ಲಿ ಒಟ್ಟು 87,881 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದರು.
ಕೆಇಎ ನಡೆಸುವ ಪ್ರವೇಶ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಕಾಲೇಜುಗಳ ಪ್ರತಿ ಕೋರ್ಸ್‍ನಲ್ಲಿ ಲಭ್ಯವಿರುವ ಸರಕಾರಿ ಕೋಟಾದ ಶೇ.70 ರಷ್ಟು ಸೀಟುಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಇದರೊಂದಿಗೆ ಹೊರಗಿನ ಕಾಲೇಜುಗಳ ಸರಕಾರಿ ಕೋಟಾದ ಶೇ.8 ರಷ್ಟು ಸೀಟುಗಳನ್ನು ಸಹ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.
ಈ ಎಲ್ಲ ಅಂಶಗಳು, ಮೂಲಭೂತ ಸೌಕರ್ಯಗಳ ಅಗತ್ಯತೆ ಹಾಗೂ ಪ್ರಸ್ತುತ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಪರಿಗಣಿಸಿ ಸಿಂಧನೂರು ತಾಲೂಕಿನಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಇಂಜಿನಿಯರಿಂಗ್ ಕಾಲೇಜಿನ ಬದಲಿಗೆ ಕೌಶಲ್ಯ ಅಭಿವದ್ದಿ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕ್ರಮ ವಹಿಸಲಾಗುವುದು ಎಂದು ರಾಯರೆಡ್ಡಿ ತಿಳಿಸಿದರು.
ರಾಜ್ಯ ಸರಕಾರದಿಂದ ಹೊಸ ಇಂಜಿನಿಯರಿಂಗ್ ಅಥವಾ ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಲು ಎಐಸಿಟಿಇ ಮಾರ್ಗದರ್ಶಿ ಸೂಚಿಗಳನ್ವಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಂಡು ಹೊಸದಿಲ್ಲಿಯ ಎಐಸಿಟಿಇ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಪರಿಷ್ಕೃತ ನಿಯಮಗಳ ಪ್ರಕಾರ ಅಗತ್ಯವಿರುವ ಬಿಲ್ಟ್-ಅಪ್ ಏರಿಯಾ ಹಾಗೂ ಎಫ್‍ಎಸ್‍ಐ/ಎಫ್‍ಎಆರ್ ಮಾನದಂಡಗಳನ್ವಯ ಅಗತ್ಯ ಜಮೀನನ್ನು ಒದಗಿಸಬೇಕಾಗುತ್ತದೆ ಎಂದು ರಾಯರೆಡ್ಡಿ ಹೇಳಿದರು.
ಸಿಂಧನೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸಮೀಪದಲ್ಲೇ ಅಭ್ಯಾಸ ಮಾಡಲು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಲಭ್ಯವಿವೆ. ಸಿಂಧನೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಗಾವತಿಯ ಸರಕಾರಿ ಇಂಜಿನಿಯರಿಂಗ್ ಕಾಲೇಜು, 90 ಕಿ.ಮೀ ದೂರದಲ್ಲಿರುವ ರಾಯಚೂರು ಸರಕಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ 100 ಕಿ.ಮೀ ದೂರದಲ್ಲಿರುವ ತಳಕಲ್ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.
ಕಾಲೇಜು ಸ್ಥಾಪನೆ ಬಗ್ಗೆ ಪರಿಶೀಲಿಸಿ ಕ್ರಮ: ಸಿಂಧನೂರು ತಾಲೂಕಿನಲ್ಲಿ ಹೊಸದಾಗಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಪ್ರಸ್ತಾವನೆ ಕುರಿತು ಕೂಲಂಕಶವಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಸಿಂಧನೂರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ನಗರಗಳಿಗೆ ಪ್ರಯಾಣ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ರಾಯರೆಡ್ಡಿ ತಿಳಿಸಿದರು.