SIR | ʼಎಎಸ್‍ಡಿಡಿಒʼ ಪಟ್ಟಿಯಲ್ಲಿ 1.10 ಕೋಟಿಗೂ ಅಧಿಕ ಮತದಾರರು : ರಾಜ್ಯ ಮುಖ್ಯ ಚುನಾವಣಾಧಿಕಾರಿ
‘ಪತ್ತೆಯಾಗದ ಮತದಾರರು 16 ಲಕ್ಷಕ್ಕೂ ಅಧಿಕ’
ಬೆಂಗಳೂರು : ರಾಜ್ಯದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಮೊದಲ ಹಂತದ ಗಣತಿ ನಮೂನೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. 2026ರ ಜೂ.16ರ ಅಂಕಿ-ಅಂಶದಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಈ ಪೈಕಿ 1,10,97,426(ಶೇ.20.02)ಮತದಾರರು ಎಎಸ್‍ಡಿಡಿಒ (ಗೈರು, ಸ್ಥಳಾಂತರ, ಮೃತರು, ನಕಲಿ ಹಾಗೂ ಇತರೆ) ಪಟ್ಟಿಯಲ್ಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ಬುಧವಾರ ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಬಿಎಲ್‍ಒಗಳಿಂದ ಶೇ.100ರಷ್ಟು ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ. ಆ ಪೈಕಿ 4,43,17,263(ಶೇ.79.95)ರಷ್ಟು ಮತದಾರರು ಗಣತಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ, ಸಹಿ ಹಾಕಿ ಬಿಎಲ್‍ಒಗಳಿಗೆ ಹಿಂದಿರುಗಿಸಿದ್ದಾರೆ ಎಂದು ವಿವರಿಸಿದರು.
ಮನೆ ಮನೆ ಸಮೀಕ್ಷೆ ಮೂಲಕ ಸಂಗ್ರಹಿಸಲಾದ ಒಟ್ಟು 5,54,32,314 ಗಣತಿ ನಮೂನೆಗಳ ಪೈಕಿ 5,54,14,689 ನಮೂನೆಗಳನ್ನು (ಶೇ.99.97) ಡಿಜಿಟಲೀಕರಣಗೊಳಿಸಲಾಗಿದೆ. ಇನ್ನು ಕೇವಲ 17,625 (ಶೇ.0.03) ನಮೂನೆಗಳು ಮಾತ್ರ ಬಾಕಿ ಉಳಿದಿದೆ. 6,91,174 (ಶೇ.1.25) ಮತದಾರರು ಆನ್‍ಲೈನ್ ಮೂಲಕವೇ ಗಣತಿ ನಮೂನೆ ಸಲ್ಲಿಕೆ ಮಾಡಿದ್ದಾರೆ ಎಂದು ಅನ್ಬುಕುಮಾರ್ ಹೇಳಿದರು.
ಎಎಸ್‍ಡಿಡಿಒ ಪಟ್ಟಿಯಲ್ಲಿರುವ 1.10 ಕೋಟಿಗೂ ಅಧಿಕ ಮತದಾರರ ಪೈಕಿ, 66,62,257(ಶೇ.12.02) ಮತದಾರರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 16,27,642 (ಶೇ.2.94) ಮತದಾರರು ಪತ್ತೆಯಾಗದ ಅಥವಾ ಗೈರಾಗಿದ್ದಾರೆ. 16,31,245 (ಶೇ.2.94) ಮತದಾರರು ಮೃತಪಟ್ಟಿದ್ದರೆ, ಈಗಾಗಲೇ ಬೇರೆಡೆ ನೋಂದಾಯಿಸಿಕೊಂಡವರು 6,90,581 (ಶೇ.1.25) ಹಾಗೂ ಇತರೆ ವರ್ಗದಲ್ಲಿ 4,85,701 (ಶೇ.0.88) ಮತದಾರರಿದ್ದಾರೆ ಎಂದು ಅವರು ತಿಳಿಸಿದರು.
ಜೂ.30ರಿಂದ ಆರಂಭವಾಗಿರುವ ಬಿಎಲ್‍ಒಗಳ ಮನೆ ಮನೆ ಸಮೀಕ್ಷೆ ಕಾರ್ಯವು ಆ.8ರ ವರೆಗೆ ನಡೆಯಲಿದೆ. ಅಲ್ಲದೇ, ಚುನಾವಣಾ ಆಯೋಗಕ್ಕೆ ಸಾರ್ವಜನಿಕರಿಂದ ಹೊಸದಾಗಿ ಹೆಸರು ಸೇರಿಸಲು, ತಿದ್ದುಪಡಿ ಮಾಡಲು ಹಾಗೂ ಹೆಸರು ಕೈಬಿಡಲು ಒಟ್ಟು 12,20,312 ಅರ್ಜಿಗಳು ಬಂದಿವೆ. ಈ ಪೈಕಿ ಫಾರಂ ನಂ.6ರಲ್ಲಿ 3,72,201, ಫಾರಂ ನಂ.6ಎ ನಲ್ಲಿ 3,207, ಫಾರಂ ನಂ.7ರಲ್ಲಿ 30,952 ಹಾಗೂ ಫಾರಂ ನಂ.8ರಲ್ಲಿ 8,13,952 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅನ್ಬುಕುಮಾರ್ ಹೇಳಿದರು.
2026ರ ಅ.1ರ ವೇಳೆಗೆ 18 ವರ್ಷ ತುಂಬುವ ಅಥವಾ ಈಗಾಗಲೇ 18 ವರ್ಷ ಪೂರೈಸಿರುವ ಕರ್ನಾಟಕದ ಎಲ್ಲ ಅರ್ಹ ಯುವ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಆಯೋಗವು ವಿಶೇಷ ಮನವಿ ಮಾಡಿದೆ. ಇಂತಹ ಯುವ ಮತದಾರರು ಫಾರಂ 6ರ ಜೊತೆಗೆ ಘೋಷಣಾ ಪತ್ರವನ್ನು ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅರ್ಜಿ ಸಲ್ಲಿಸಲು ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು ಮತ್ತು ಪ್ರಸ್ತುತ ವಾಸವಿರುವ ವಿಳಾಸದ ನಿವಾಸಿಯಾಗಿರಬೇಕು, ಭಾರತದ ಬೇರೆಲ್ಲೂ ಮತದಾರರಾಗಿ ನೋಂದಾಯಿಸಲ್ಪಟ್ಟಿರಬಾರದು. ಅರ್ಜಿಯೊಂದಿಗೆ ಚುನಾವಣಾ ಆಯೋಗ ಸೂಚಿಸಿರುವ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ರಾಜ್ಯಾದ್ಯಂತ ಅಗತ್ಯವಿರುವಷ್ಟು ಫಾರಂ ನಂ.6 ಮತ್ತು ಘೋಷಣಾ ಪತ್ರಗಳನ್ನು ಈಗಾಗಲೇ ಮುದ್ರಿಸಿ ಎಲ್ಲ ಬಿಎಲ್‍ಒಗಳಿಗೆ ವಿತರಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಎಎಸ್‍ಡಿಡಿಒ ಪಟ್ಟಿಯನ್ನು ಈಗಾಗಲೇ ರಾಜಕೀಯ ಪಕ್ಷಗಳಿಗೆ ತಲುಪಿಸಲಾಗಿದೆ ಮತ್ತು ಪರಿಶೀಲನೆಗಾಗಿ ಬಿಎಲ್‍ಒಗಳ ಬಳಿಯೂ ಲಭ್ಯವಿದೆ. ಯಾವುದೇ ಮತದಾರರು ತಮ್ಮ ಗಣತಿ ನಮೂನೆಯಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ, ಅದನ್ನು ಸರಿಪಡಿಸಲು ಬಿಎಲ್‍ಒಗಳಿಗೆ ಅವಕಾಶ ನೀಡಲಾಗಿದೆ. ಅಂತಹ ಮತದಾರರು ಆ.8ರೊಳಗಾಗಿ ಬಿಎಲ್‍ಒಗಳನ್ನು ಸಂಪರ್ಕಿಸಬಹುದು. ಜಿಬಿಎ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಸಲು ಬಯಸುವ ಜನರಿಗಾಗಿ 10ಲಕ್ಷ ಫಾರಂ 6 ಅನ್ನು ಮುದ್ರಿಸಿ ಸಂಬಂಧಪಟ್ಟ ಇಆರ್‌ಒಗಳಿಗೆ ವಿತರಿಸಲಾಗಿದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.