ಸಿಎಂ ಎಚ್ಚರಿಕೆಯನ್ನು ಲೆಕ್ಕಿಸದೆ ಅತೃಪ್ತ ಶಾಸಕರ ಬಂಡಾಯ; ನಾಳೆ ಪ್ರತ್ಯೇಕ ಸಭೆ ಸಾಧ್ಯತೆ

Update: 2026-08-05 19:38 IST

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ‘ರಾಜೀನಾಮೆ ನೀಡಿದರೆ ಕೆಲವೇ ಕ್ಷಣಗಳಲ್ಲೇ ಅಂಗೀಕರಿಸುತ್ತೇನೆ’ ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆಯನ್ನು ಲೆಕ್ಕಿಸದ ಸಚಿವ ಸ್ಥಾನದ ಆಕಾಂಕ್ಷಿ ಹಿರಿಯ ಶಾಸಕರು, ನಾಳೆ (ಆ.6) ಬೆಂಗಳೂರು ನಗರದಲ್ಲಿ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ನಿಯೋಜನೆಗೊಂಡಿರುವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದು, ಸ್ಪೀಕರ್ ಸ್ಥಾನವನ್ನು ಒಪ್ಪಿಕೊಳ್ಳದೆ ‘ಆಡಳಿತ ಪಕ್ಷದ ಬದಲಿಗೆ ಪ್ರತಿಪಕ್ಷ ಸದಸ್ಯರುಗಳ ಸಾಲಿನಲ್ಲಿ ಕೂರಲು ಆಸನ ವ್ಯವಸ್ಥೆ’ಗೆ ಕೋರಿಕೆ ಸಲ್ಲಿಸಲು ಮುಂದಾಗಿರುವುದು ಆಡಳಿತ ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದಿಟ್ಟಿದೆ.

ಈ ಮಧ್ಯೆ, ಆ.3ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನವೋಲಿಕೆ ಬಳಿಕ ‘ನನ್ನ ರಾಜೀನಾಮೆ ಪತ್ರವನ್ನು ಹಿಂಪಡೆಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಆದರೆ, ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಹಿರಿಯ ಶಾಸಕ ಬಿ.ಆರ್.ಪಾಟೀಲ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಅಚ್ಚರಿ ಮೂಡಿಸಿದ್ದಾರೆ.

ಒಂದೆಡೆ ಅತೃಪ್ತ ಶಾಸಕರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಸಿಎಂ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಚಲುರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಶಾಸಕರಾದ ಡಾ.ಎಚ್.ಡಿ.ರಂಗನಾಥ್, ಉದಯ್ ಕೆ.ಎಂ. ಅವರು ಶಾಸಕರ ಮನವೋಲಿಕೆ ಪ್ರಯತ್ನ ನಡೆಸಿದ್ದಾರೆ. ಆದರೂ, ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತವರ ಬೆಂಬಲಿಗರು ಇದಕ್ಕೆ ಮನ್ನಣೆ ನೀಡಿಲ್ಲ ಎನ್ನಲಾಗಿದೆ.

ನಾಳೆ(ಆ.6) ಹಿರಿಯ ಶಾಸಕ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಆರ್.ವಿ. ದೇಶಪಾಂಡೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್, ಎನ್.ವೈ.ಗೋಪಾಲಕೃಷ್ಣ, ಡಾ.ಎಂ.ಸಿ.ಸುಧಾಕರ್, ಅಪ್ಪಾಜಿ ನಾಡಗೌಡ, ಎಸ್.ಆರ್.ಶ್ರೀನಿವಾಸ್, ಬಸವರಾಜ ನೀಲಪ್ಪ ಶಿವಣ್ಣನವರ್, ಎನ್.ಎ.ಹಾರಿಸ್, ರಹೀಂ ಖಾನ್, ಎಸ್.ಎನ್.ನಾರಾಯಣಸ್ವಾಮಿ, ಪ್ರಸಾದ್ ಅಬ್ಬಯ್ಯ, ಪಿ.ಎಂ.ಅಶೋಕ್ ಪಟ್ಟಣ್, ಎ.ಆರ್.ಕೃಷ್ಣಮೂರ್ತಿ, ಕೆ.ಷಡಕ್ಷರಿ ಸೇರಿದಂತೆ ಹಲವು ಶಾಸಕರು ಭಾಗವಹಿಸುವ ನಿರೀಕ್ಷೆಗಳಿವೆ.

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಹಿರಿಯ ಶಾಸಕರು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಳಿನ ಸಭೆಯಲ್ಲಿ ಮುಂದಿನ ರಾಜಕೀಯ ಕಾರ್ಯತಂತ್ರ, ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಸಂಬಂಧ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಭೆಗೆ ಗೈರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಲು ತೆರಳಿದ್ದ ಸಚಿವ ಭೈರತಿ ಸುರೇಶ್ ಅವರಿಗೆ ಜಿಲ್ಲೆಯ ಶಾಸಕರ ಬಂಡಾಯದ ಬಿಸಿ ತಟ್ಟಿದೆ. ಬೈರತಿ ಸುರೇಶ್ ಕರೆದ ಸಭೆಗೆ ಜಿಲ್ಲೆಯ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಭೆಗೆ ಗೈರಾಗಿದ್ದಾರೆ.

‘ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಅಸಮಾಧಾನ ಸಹಜ. ಕಾಂಗ್ರೆಸ್ ದೊಡ್ಡ ಪಕ್ಷ. ಸಚಿವ ಸಂಪುಟ ವಿಸ್ತರಣೆಯಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುತ್ತದೆ. ಪಕ್ಷ, ಕ್ಷೇತ್ರದ ಸಮಸ್ಯೆ ಇರುತ್ತದೆ. ನಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ’

-ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದ ಶಾಸಕ


 

‘ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ತಮ್ಮನ್ನು ಭೇಟಿ ಮಾಡಲು ಹೇಳಿದ್ದರು, ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಅವರು ನಮ್ಮ ಅಹವಾಲನ್ನು ಕೇಳಿದ್ದಾರೆ. ಯಾವುದೇ ದುಡುಕಿನ ನಿರ್ಧಾರ ಮಾಡಬೇಡಿ. ನಿಮಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನಮಗೂ ಬೇಸರವಿದೆ. ಇನ್ನೆರಡು ದಿನಗಳಲ್ಲಿ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬರಲಿದ್ದು, ತಮ್ಮೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಹೇಳಿದ್ದಾರೆ’

-ಎಸ್.ಎಂ.ನಾರಾಯಣಸ್ವಮಿ, ಬಂಗಾರಪೇಟೆ ಕ್ಷೇತ್ರದ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News