ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ; ಸಾಮಾಜಿಕ, ಶೈಕ್ಷಣಿಕ ವರದಿ ಬಿಡುಗಡೆಗೆ ಒಕ್ಕೂರಲ ಆಗ್ರಹ
ಬೆಂಗಳೂರು : ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ‘ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ(ಜಾತಿ ಗಣತಿ)ಯ ವರದಿ’ಯನ್ನು ಬಿಡುಗಡೆ ಮಾಡಿ, ಜಾರಿಗೊಳಿಸುವಂತೆ ‘ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’ವು ಇಂದಿಲ್ಲಿ ಒಕ್ಕೂರಲಿನಿಂದ ಆಗ್ರಹಿಸಿದೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ‘ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’ದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ರಜತ ಮಹೋತ್ಸವ, ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಇದೆ. ಕರ್ನಾಟಕದಲ್ಲಿ ಶೇ.32ರಷ್ಟು ಮೀಸಲಾತಿ ಇದೆ. ದೇಶದಲ್ಲಿ ಶೇ.50ರಷ್ಟು ಹಿಂದುಳಿದ ವರ್ಗದ ಜನರು ಇದ್ದೇವೆ. ಅದಕ್ಕಾಗಿ ರಾಜ್ಯದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ಸಿಗಬೇಕು. ಹಿಂದುಳಿದ ಜಾತಿಗಳಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು. ಕೇಂದ್ರ ಸರಕಾರ ನಡೆಸುವ ಜನಗಣತಿಯಲ್ಲಿ ಒಬಿಸಿ ಕಾಲಂ ತೆಗೆಯಲಾಗಿದೆ. ಅದನ್ನು ಮತ್ತೆ ಸೇರಿಸಬೇಕು’ ಎಂದು ಮನವಿ ಮಾಡಿದರು.
ಇದೇ ವೇಳೆ ಹಿಂದುಳಿದ ಜಾತಿಗಳಿಗೆ ಸಂಬಂಧಿಸಿರುವ ವಿವಿಧ ಬೇಡಿಕೆಗಳಿರುವ ಮನವಿ ಪತ್ರವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು. ಸಮಾವೇಶದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಡಾ.ಅಜಯ್ ಸಿಂಗ್, ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಅಜಯ್ ಸಿಂಗ್, ಸಾರಿಗೆ ಸಚಿವ ಬೈರತಿ ಸುರೇಶ್, ಶಾಸಕ ಪ್ರದೀಪ್ ಈಶ್ವರ್, ಪರಿಷತ್ ಸದಸ್ಯ ಬಿ.ಎಸ್.ಶಿವಣ್ಣ, ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಎಣ್ಣೆಗೆರೆ ವೆಂಕಟರಾಮಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು: ಲೋಕಸಭೆ, ವಿಧಾನಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದು. ಪ್ರವರ್ಗ 1, ಪ್ರವರ್ಗ 2ಎ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿಗೆ ಸರಕಾರ ಆದೇಶ ಹೊರಡಿಸುವುದು. ಹಿಂದುಳಿದ ವರ್ಗಗಳ ಸಮಸ್ಯೆ ಆಲಿಸಲು ರಾಜ್ಯಮಟ್ಟದ ಸಮಿತಿ ರಚಿಸುವುದು. ಒಟ್ಟಾರೆ ಮೀಸಲಾತಿಯನ್ನು ಶೇ.50ರಿಂದ ಶೇ.75ಕ್ಕೆ ಹೆಚ್ಚಿಸುವುದು.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮೇಲೆ ಕಾನೂನು ಕ್ರಮ ವಹಿಸುವುದು. ಹಿಂದುಳಿದ ವರ್ಗಗಳಿಗೆ ಸೇರಿದ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿ ಮಾಡುವುದು. 2027-28ರ ಬಜೆಟ್‍ನಲ್ಲಿ 250 ಬಾಲಕಿಯರು, 250 ಬಾಲಕರ ವಸತಿ ನಿಲಯವನ್ನು ಮಂಜೂರು ಮಾಡುವುದು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ ನಿವೇಶನ ಮಂಜೂರು ಮಾಡುವುದು.
ಮುಂದಿನ ಸಿಎಂ ಸಿದ್ದು ಎಂದ ಅಭಿಮಾನಿಗಳು: ಶಾಸಕ ಪ್ರದೀಪ್ ಈಶ್ವರ್ ಭಾಷಣ ಮಾಡುವಾಗಲೇ ಮಾಜಿ ಸಿಎಂ ಹಾಗೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕರೆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಫಲಕಗಳನ್ನು ಹಿಡಿದಿದ್ದರು. ಅನೇಕ ಬಾರಿ ಮುಂದಿನ ಸಿಎಂ ಸಿದ್ದು ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು ಘೋಷಣೆ ಕೂಗಿದರು.