ಕಿರಣ್ ಮಜುಂದಾರ್ ಶಾ/ಕೃಷ್ಣ ಬೈರೇಗೌಡ

ಬೆಂಗಳೂರು : "ಪೌರಕಾರ್ಮಿಕರು ಮೊದಲು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ನಗರವು ಸ್ವಚ್ಛವಾಗಿರದಿದ್ದರೆ ಖಾಯಂ ಉದ್ಯೋಗದ ಪ್ರಶ್ನೆಯೇ ಇಲ್ಲ" ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪೌರಕಾರ್ಮಿಕರ ಸೇವೆ ಖಾಯಂಗೊಳಿಸುವ ಬೇಡಿಕೆಗೆ ನೀಡಿದ್ದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕಿರಣ್ ಮಜುಂದಾರ್–ಶಾ, ‘ಚೆನ್ನಾಗಿ ಹೇಳಿದ್ದೀರಿ’ ಎಂದು ಸಚಿವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಏನಿದು ವಿವಾದ?

ಶನಿವಾರ ಬೆಂಗಳೂರು ನಗರದ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೃಷ್ಣ ಬೈರೇಗೌಡ ಸ್ವಚ್ಛತಾ ಕಾರ್ಯಗಳ ಪರಿಶೀಲನೆ ನಡೆಸಿದ್ದರು.

ಈ ವೇಳೆ ಪೌರಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿ, ತಮ್ಮ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೃಷ್ಣ ಬೈರೇಗೌಡ, ‘ಶೇ 30ರಷ್ಟು ಪೌರಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಹಾಜರಾಗುವುದೇ ಇಲ್ಲ. ಕೆಲವರು ಕೆಲಸಕ್ಕೆ ಬಂದರೂ ಮನೆ–ಮನೆಗೆ ತೆರಳಿ ಕಸ ಸಂಗ್ರಹಿಸುವುದಿಲ್ಲ. ಇದರಿಂದ ಹಲವೆಡೆ ಜನರು ಕಸವನ್ನು ರಸ್ತೆಗಳಿಗೆ ಎಸೆಯುವಂತಾಗಿದೆ. ನಗರದ ಹಲವು ಪ್ರದೇಶಗಳು ಗಬ್ಬೆದ್ದು ನಾರುತ್ತಿವೆ. ಹೀಗಿರುವಾಗ ಕೆಲಸವನ್ನು ಸರಿಯಾಗಿ ನಿರ್ವಹಿಸದವರನ್ನು ಏಕೆ ಖಾಯಂಗೊಳಿಸಬೇಕು?’ ಎಂದು ಪ್ರಶ್ನಿಸಿದ್ದರು.

‘ಪೌರಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಹಾಜರಾಗದ ಕಾರಣ ನಾವು ಜನರಿಂದ ಬೈಗುಳ ಕೇಳಿಕೊಳ್ಳುತ್ತಿದ್ದೇವೆ’ ಎಂದೂ ಅವರು ಹೇಳಿದ್ದರು.

ಸಚಿವರ ಈ ಹೇಳಿಕೆಗೆ ಪೌರಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ‘ನಮ್ಮ ಮನವಿಯನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಬದಲು ಕಾರ್ಮಿಕರ ವಿರುದ್ಧವೇ ಟೀಕೆ ಮಾಡಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದರು. ಸಚಿವರ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧ :

ಕಿರಣ್ ಮಜುಂದಾರ್–ಶಾ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ರೋಹನ್ ಮಿರಾಜ್ಕರ್ ಅವರು ಕಿರಣ್ ಅವರ ನಿಲುವನ್ನು ಬೆಂಬಲಿಸಿ, ‘ಕೃಷ್ಣ ಬೈರೇಗೌಡ ಹೇಳಿದ್ದು ಸರಿ. ಪೌರಕಾರ್ಮಿಕರು ಪ್ರತಿದಿನ ತ್ಯಾಜ್ಯ ಸಂಗ್ರಹಿಸುವುದಿಲ್ಲ ಮತ್ತು ನಗರವನ್ನು ಸ್ವಚ್ಛಗೊಳಿಸುವುದಿಲ್ಲ. ಹಾಗಿದ್ದರೆ ಅವರನ್ನು ಏಕೆ ಖಾಯಂಗೊಳಿಸಬೇಕು?’ ಎಂದು ಪ್ರಶ್ನಿಸಿದ್ದಾರೆ.

ವಿಘ್ನೇಶ್ ಎಂಬವರು ಇದಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸಿದ್ದು, ‘ನೀವು ನಿಮ್ಮ ಸ್ವಂತ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರ ಬಗ್ಗೆ ಟೀಕಿಸಲು ಬಯಸುತ್ತೀರಿ' ಎಂದು ಹೇಳಿದ್ದಾರೆ.

ರಮೇಶ್ ಅವರು ಕೃಷ್ಣ ಬೈರೇಗೌಡ ಅವರಿಗೆ ಬೇರೆ ರೀತಿಯ ಪರಿಹಾರದ ಸಲಹೆ ನೀಡಿದ್ದಾರೆ. ‘ಮನೆಮನೆಯ ಹಸಿ ತ್ಯಾಜ್ಯ ಬೇರ್ಪಡಿಸುವುದು ಕಡ್ಡಾಯ ಎಂಬ ಕಾನೂನು ಮಾಡಬೇಕು. ಅದನ್ನು ನೀರು ಮತ್ತು ನೈರ್ಮಲ್ಯ ಸೇವೆಗಳೊಂದಿಗೆ ಸಂಪರ್ಕಿಸಬೇಕು. ಪ್ರದೇಶವಾರು ತ್ಯಾಜ್ಯ ಸಂಗ್ರಹಣೆಗೆ ಖಾಸಗಿಯವರಿಗೆ ಅವಕಾಶ ನೀಡಬಹುದು. ಇದರಿಂದ ಸಿಬಿಜಿ ಉತ್ಪಾದನೆ ಮತ್ತು ಒಣ ತ್ಯಾಜ್ಯ ಮರುಬಳಕೆ ಮಾಡಬಹುದು’ ಎಂದು ಹೇಳಿದ್ದಾರೆ. ‘ಇಲ್ಲದಿದ್ದರೆ ಇದು ಸಂಪತ್ತಿನ ವ್ಯರ್ಥವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ಆಂಟಿಕ್ ಎಂಬ ಬಳಕೆದಾರರು ಕಿರಣ್ ಮಜುಂದಾರ್–ಶಾ ಅವರನ್ನು ಟೀಕಿಸಿದ್ದಾರೆ. ‘ದೈನಂದಿನ ಕೂಲಿ ಕಾರ್ಮಿಕರನ್ನು ಟೀಕಿಸಲು ಮಿಲಿಯನ್ ಡಾಲರ್ ಮೌಲ್ಯದ ಮನೆಯಲ್ಲಿ ಕುಳಿತಿರುವ ಬಿಲಿಯನೇರ್‌ ಒಬ್ಬರು ಪ್ರೋತ್ಸಾಹ ನೀಡುತ್ತಿದ್ದಾರೆ. ಮಂತ್ರಿಗಳು, ಶಾಸಕರು, ಸಂಸದರು ಅಥವಾ ಗುತ್ತಿಗೆದಾರರನ್ನು ಅವರ ಕೆಲಸಕ್ಕೆ ಏಕೆ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ? ಬದಲಾಗಿ, ಕಠಿಣ ಪರಿಶ್ರಮ ಮತ್ತು ಅಲ್ಪ ವೇತನದ ಮೇಲೆ ಬದುಕುತ್ತಿರುವ ಜನರನ್ನು ಗುರಿಯಾಗಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಅಶ್ವಿನ್ ಮಹೇಶ್ ಅವರು, ‘ನಿಯಮಿತವಾಗಿ ಹಾಜರಾಗಿ ಕೆಲಸ ಮಾಡುವ ಪೌರಕಾರ್ಮಿಕರು ಗೈರುಹಾಜರಾಗುವವರ ಹೊರೆ ಏಕೆ ಹೊರಬೇಕು? ನಗರಾಡಳಿತವು ಮೊದಲಿನಿಂದಲೇ ಉತ್ತಮ ಉದ್ಯೋಗದಾತನಾಗಬೇಕು. ಆಗ ಕೆಲಸದಲ್ಲಿ ಮೋಸ ಮಾಡುವವರನ್ನು ನಿಭಾಯಿಸುವುದು ಸುಲಭವಾಗುತ್ತದೆ. ಅದಕ್ಕೆ ಸಾರ್ವಜನಿಕ ಬೆಂಬಲವೂ ದೊರೆಯುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜಸ್ಟ್‌ಇಂಡಿಯನ್’ ಎಂಬ ಬಳಕೆದಾರರು, ‘ಮನೆ ಬಾಗಿಲಿನಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆಯ ಕೊರತೆಯೇ ಸಮಸ್ಯೆಯ ಮೂಲ’ ಎಂದು ಹೇಳಿದ್ದಾರೆ.

ಸ್ವಚ್ಛತಾ ಪರಿಶೀಲನೆಯ ವೇಳೆ ಕೃಷ್ಣ ಬೈರೇಗೌಡ ಅವರು ನಗರದ ವಿವಿಧೆಡೆಯ ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆ, ರಾಜಕಾಲುವೆ, ಕೆರೆಗಳು, ವಿವಿಧ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಪರಿಶೀಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor