‘ತುಮಕೂರು ಜಿಲ್ಲೆಯಲ್ಲಿ ನೂತನ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು’: ಕೇಂದ್ರ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ
ಬೆಂಗಳೂರು: ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕೆಂಬುದು ರಾಜ್ಯದ ಬಹುತೇಕ ಜನಪ್ರತಿನಿಧಿಗಳ ಒತ್ತಾಯವಾಗಿದೆ. ಶಿರಾದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪ್ರಗತಿಗೆ ಸಹಾಯಕವಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿರುವ ಸೋಮಣ್ಣ, ಈ ಬಗ್ಗೆ ಕಳೆದ ವರ್ಷದ ಮಾ.20ರಂದು ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಶಾಸಕರು ನನಗೆ ಪತ್ರ ಬರೆದು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.
ಆ ಭಾಗವಾಗಿಯೇ ಅದೇ ವರ್ಷದ ಎ.22ರಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಈ ಭಾಗದ ಜನಪ್ರತಿನಿಧಿಗಳ ಒತ್ತಾಸೆಯನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ರಾಜ್ಯವು ಬೆಂಗಳೂರು ಕೇಂದ್ರಿತವಾಗಿ ಅಭಿವೃದ್ಧಿ ಸಾಧಿಸಿದೆ. ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದ ಎಲ್ಲ ಭಾಗಗಳನ್ನು, ನಗರಗಳನ್ನು ಸಶಕ್ತವಾಗಿ ಬೆಳೆಸುವುದು ಜನಪ್ರತಿನಿಧಿಗಳೆಲ್ಲರ ಜವಾಬ್ದಾರಿಯೂ ಹೌದು. ಆ ಹಿನ್ನೆಲೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಬೆಂಗಳೂರಿನ ಸಮೀಪ ನಿರ್ಮಿಸಿದರೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಅಭಿವೃದ್ಧಿಗೆ ನ್ಯಾಯ ಸಂದಂತೆ ಆಗುವುದಿಲ್ಲ ಎಂದು ಅವರು ನುಡಿದಿದ್ದಾರೆ.
ತುಮಕೂರಿನ ಶಿರಾ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯಕರ್ನಾಟಕ ಭಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ. ಶಿರಾದ ಸುತ್ತುಮುತ್ತ ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ, ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಿವೆ. ರಾಷ್ಟ್ರೀಯ ಹೆದ್ದಾರಿ-48, 69, 544ಇ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಹೊಸ ರೈಲು ಮಾರ್ಗಗಳ ಸಾರಿಗೆ ಸಂಪರ್ಕ ಜಾಲವೂ ಬಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಪ್ರಮಾಣದ ಸರಕಾರಿ ಭೂಮಿ ಲಭ್ಯವಿದ್ದು, ಭದ್ರಾ ಮೇಲ್ದಂಡೆ ಕಾಲುವೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರಿನ ಲಭ್ಯತೆಯ ಜೊತೆಗೆ ಚಿತ್ರದುರ್ಗದ ಡಿಆರ್‍ಡಿಒ, ಐಐಎಸ್ಸಿ ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯ ಎಚ್‍ಎಎಲ್ ಹೆಲಿಕಾಪ್ಟರ್ ಘಟಕಗಳೂ ಅತ್ಯಂತ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸೋಮಣ್ಣ ವಿವರಿಸಿದ್ದಾರೆ.
ಶಿರಾದ ಈ ಸ್ಥಳವು ಡಿಜಿಸಿಎಯ ನಿಯಮಕ್ಕನುಗುಣವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 150 ಕಿ.ಮೀ ದೂರವಿದೆ. ಅಲ್ಲದೇ, ಇದರಿಂದಾಗಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಅಂತರ್‍ರಾಷ್ಟ್ರೀಯ ಪ್ರಯಾಣ ಹಾಗೂ ಸರಕು ಸಾಗಣೆಗೆ ಅನುಕೂಲವಾಗಲಿದೆ. ಕೈಗಾರಿಕೆ, ಉದ್ಯೋಗ, ಹೂಡಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಲಿದ್ದು, ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ತುಮಕೂರಿನ ಶಿರಾ ಭಾಗದಲ್ಲಿಯೇ ನೂತನ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೇಂದ್ರ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದೇನೆ. ರಾಜ್ಯ ಸರಕಾರವು ರಾಜ್ಯದ ಸಮಗ್ರ ಅಭಿವೃದ್ಧಿಯನ್ನೆ ಮಾನದಂಡವನ್ನಾಗಿ ಇಟ್ಟುಕೊಂಡು ಚಿಂತನೆ ನಡೆಸಬೇಕೆಂದು ಕೋರುತ್ತೇನೆ ಎಂದು ಸೋಮಣ್ಣ ಮನವಿ ಮಾಡಿದ್ದಾರೆ.
‘ರಾಜ್ಯದ 2ನೇ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗಬೇಕು ಎಂಬ ಇಚ್ಛೆಯನ್ನು ನಾನು ಮೊದಲಿನಿಂದಲೂ ಹೇಳಿದ್ದೇನೆ. ತಾಂತ್ರಿಕ ಸಮಿತಿಯು ನೆಲಮಂಗಲದ ಕುಣಿಗಲ್ ರಸ್ತೆ ಹಾಗೂ ಬಿಡದಿ ಪ್ರದೇಶಗಳನ್ನು ಪರಿಶೀಲಿಸಿ ಸರಕಾರಕ್ಕೆ ಶಿಫಾರಸು ಸಲ್ಲಿಸಿದ್ದು, ಡಿಜಿಸಿಎ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ತುಮಕೂರಿನಲ್ಲಿ ವಿಮಾನ ನಿಲ್ದಾಣವಾದರೆ ಸುಮಾರು 20 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದ್ದು, ತಾಂತ್ರಿಕವಾಗಿಯೂ ಸೂಕ್ತ ಸ್ಥಳವಾಗಿದೆ’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ