×
Ad

ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷ ಅಲ್ಲ, ಆತ ವೃತ್ತಿಪರ ಕ್ರಿಮಿನಲ್: ಸಚಿವ ದಿನೇಶ್ ಗುಂಡೂರಾವ್

Update: 2024-01-04 19:52 IST

ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಹಳೆಯ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷನೂ ಅಲ್ಲ, ಶ್ರೀಕೃಷ್ಣನಂತೆ ಅವತಾರ ಪುರುಷನೂ ಅಲ್ಲ. ಆತ ವೃತ್ತಿಪರ ಕ್ರಿಮಿನಲ್ ಅಷ್ಟೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶ್ರೀಕಾಂತ್ ಪೂಜಾರಿ ವಿರುದ್ಧ 1992ರಿಂದ 2014ರ ವರೆಗೆ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ರಾಮಭಕ್ತ ಎಂಬ ಸೋಗು ಹಾಕಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬಾರದೆ? ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಮತ್ತು ಸಂಸ್ಕಾರವೆ ಇಲ್ಲದಂತಾಗಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಾ ಪ್ರಮಾಣಪತ್ರವನ್ನು ನ್ಯಾಯಾಲಯ ಕೇಳಿದೆ. ಅದರಂತೆ ಪೊಲೀಸರು ಇತ್ಯರ್ಥವಾಗದ ಹಳೆಯ ಪ್ರಕರಣ ಸಂಬಂಧ ಶ್ರೀಕಾಂತ್ ಪೂಜಾರಿ ಹೆಸರಿದ್ದುದರಿಂದ ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯದ ಸೂಚನೆಯ ಅನುಸಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದರೂ ರಾಜ್ಯ ಬಿಜೆಪಿ ನಾಯಕರು ಕ್ರಿಮಿನಲ್ ಪರ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News