×
Ad

ಬೆಂಗಳೂರು ಕಾಲ್ತುಳಿತ ಪ್ರಕರಣ: ಮೈಕಲ್ ಕುನ್ಹಾ ವರದಿ ರದ್ದು ಕೋರಿ ಡಿಎನ್‌ಎ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2025-11-12 20:03 IST

File Photo: PTI

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನ್ಯಾ. ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಜುಲೈ 11ರಂದು ಸರ್ಕಾರಕ್ಕೆ‌ ಸಲ್ಲಿಸಿರುವ ವರದಿ ರದ್ದು‌ಕೋರಿ ಡಿಎನ್‌ಎ ಎಂಟರ್ಟೇನ್ಮೆಂಟ್‌ ನೆಟ್ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ ಸಲ್ಲಿಸಿರುವ ಅರ್ಜಿ ಕುರಿತು ಬುಧವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಬಿ.ಕೆ. ಸಂಪತ್‌ ಕುಮಾರ್‌ ವಾದ ಮಂಡಿಸಿ, ಮಾಧ್ಯಮಗಳಲ್ಲಿ ಡಿಎನ್‌ಎ ಮತ್ತು ಅದರ ಪದಾಧಿಕಾರಿಗಳ ಹೆಸರು ಪ್ರಸ್ತಾಪಿಸಿ ಘನತೆಗೆ ಹಾನಿ ಮಾಡಲಾಗಿದೆ. ನ್ಯಾ. ಕುನ್ಹಾ ಆಯೋಗವು ವಿಚಾರಣೆಯ ವೇಲೆ ಪಾಟೀಸವಾಲಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ನ್ಯಾಯಪೀಠ, ಅರ್ಜಿದಾರರಿಗೆ ಮಾನಹಾನಿಯಾಗಿದ್ದರೆ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರವಿದೆ. ಅಲ್ಲಿ ನಷ್ಟ ತುಂಬಿಕೊಡಲು ಸಿವಿಲ್‌ ದಾವೆ ಹೂಡಬಹುದು ಎಂದಿತಲ್ಲದೆ, ನ್ಯಾ. ಕುನ್ಹಾ ವರದಿಯನ್ನು ರದ್ದುಪಡಿಸಿದರೂ, ನಿಮಗೆ ಆಗಿದೆ ಎನ್ನಲಾದ ಹಾನಿಯನ್ನು ತುಂಬಿಕೊಡಲಾಗದು ಎಂದು ಹೇಳಿತು.

ಅದಕ್ಕೆ ಪ್ರತಿಕ್ರಿಯಿಸಿದ ಸಂಪತ್‌ ಕುಮಾರ್‌ ಅವರು, ಸಂವಿಧಾನದ ಪರಿಚ್ಛೇದ 21ರ ಅಡಿ ಮಾನಹಾನಿಯಾದರೆ ರಿಟ್‌ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದುವರೆಗೂ ಸರ್ಕಾರ ಸದನದಲ್ಲಿ ನ್ಯಾ. ಕುನ್ಹಾ ವರದಿಯನ್ನು ಮಂಡಿಸಿಲ್ಲ. ಈ ವರದಿಯಲ್ಲಿ ಸಾಕಷ್ಟು ದೋಷಗಳಿವೆ ಎಂದರಲ್ಲದೆ, ಲಾಲ್‌ ಕೃಷ್ಣ ಅಡ್ವಾಣಿ ಹಾಗೂ ಬಿಹಾರ ರಾಜ್ಯ ಸರ್ಕಾರದ ನಡುವಿನ ಪ್ರಕರಣವನ್ನು ಉಲ್ಲೇಖಿಸಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ನೋಟಿಸ್‌ ನೀಡುವುದಾದರೆ ದೂರಿನ ಪ್ರತಿಯ ಜತೆಗೆ ನೋಟಿಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಕ್ರಿಮಿನಲ್‌ ಪ್ರಕ್ರಿಯೆ ಸಂಬಂಧ ಸ್ವತಂತ್ರವಾಗಿ ಪೊಲೀಸರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಒಂದೊಮ್ಮೆ ನ್ಯಾ. ಕುನ್ಹಾ ವರದಿ ಆಧರಿಸಿ ಡಿಎನ್‌ಎ ಎಂಟರ್ಟೇನ್ಮೆಂಟ್‌ಗೆ ನೋಟಿಸ್‌ ನೀಡುವುದಾದರೆ ಅದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗುವುದು ಎಂದರು.

ವಾದ ಮುಂದುವರಿಸಿದ ಅಡ್ವೊಕೇಟ್ ಜನರಲ್, ಜೂನ್‌ 4ರಂದು ಕಾಲ್ತುಳಿತ ಸಂಭವಿಸಿದ್ದು, ಜುಲೈ 11ರಂದು ನ್ಯಾ. ಕುನ್ಹಾ ಆಯೋಗ ವರದಿ ನೀಡಿದೆ. ಘಟನೆ ನಡೆದ ದಿನದಿಂದಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆಯೇ ಹೊರತು ಸರ್ಕಾರದಿಂದ ಆ ಕೆಲಸವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.

ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News