ಬೆಂಗಳೂರು : ರಾಜ್ಯದ ನಾಗರಿಕರಿಗೆ ಯಾವುದೇ ತೊಂದರೆಯಿಲ್ಲದೆ, ಸಕಾಲದಲ್ಲಿ ಹಾಗೂ ಪಾರದರ್ಶಕವಾಗಿ ಸರ್ಕಾರಿ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಎಲ್ಲ ಇಲಾಖೆಗಳಿಗೂ ಅನ್ವಯವಾಗುವಂತೆ ಹೊಸ ಪ್ರಮಾಣಿತ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ (ಕೆಎಆರ್‌ಸಿ-2) ಶಿಫಾರಸುಗಳ ಆಧಾರದ ಮೇಲೆ ಪ್ರಜಾ ಸೇವಾ ಇಲಾಖೆಯು ಸಮಗ್ರ ನಿಯಮಾವಳಿಗಳನ್ನು ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಅವರ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ.

ಎಲ್ಲ ಸೇವೆಗಳು ಆನ್‌ಲೈನ್ ಮತ್ತು ಸಕಾಲ ವ್ಯಾಪ್ತಿಗೆ :

ಸರ್ಕಾರದ ಪರವಾನಗಿ, ಪ್ರಮಾಣಪತ್ರ ಸೇರಿದಂತೆ ನಾಗರಿಕರಿಗೆ ಒದಗಿಸುವ ಎಲ್ಲ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಗೆ ತಂದು, ‘ಸಕಾಲ’ ವ್ಯಾಪ್ತಿಗೆ ಒಳಪಡಿಸಲಾಗುವುದು. ಸೇವೆಗಳನ್ನು ಒದಗಿಸುವ ಕಾಲಮಿತಿಯನ್ನು ಕಡಿತಗೊಳಿಸಲಾಗುತ್ತಿದ್ದು, ಸಾಧ್ಯವಿರುವ ಕಡೆಗಳಲ್ಲಿ ಅರ್ಜಿ ಸಲ್ಲಿಸಿದ ಕೌಂಟರ್‌ನಲ್ಲೇ ತಕ್ಷಣ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಆಧಾರ್, ಡಿಜಿಲಾಕರ್ ಬಳಕೆಗೆ ಆದ್ಯತೆ :

ಆನ್‌ಲೈನ್ ಸೇವೆಗಳಲ್ಲಿ ಆಧಾರ್ ಹಾಗೂ ಮೊಬೈಲ್ ಆಧಾರಿತ ಪರಿಶೀಲನೆ ವ್ಯವಸ್ಥೆ ಬಳಸಲಾಗುವುದು. ವಿತರಿಸುವ ಎಲ್ಲ ಪ್ರಮಾಣಪತ್ರಗಳನ್ನು ‘ಡಿಜಿಲಾಕರ್’ನಲ್ಲಿ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ನಾಗರಿಕರು ತಮ್ಮ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ.

ಅರ್ಜಿ ತಿರಸ್ಕೃತವಾದರೆ ಶುಲ್ಕ ಸ್ವಯಂ ಮರುಪಾವತಿ :

ಅರ್ಜಿ ತಿರಸ್ಕೃತವಾದಲ್ಲಿ ಪಾವತಿಸಿದ ಶುಲ್ಕವನ್ನು ಸ್ವಯಂಚಾಲಿತವಾಗಿ ಮರುಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಯುಪಿಐ ಸೇರಿದಂತೆ ಡಿಜಿಟಲ್ ಪಾವತಿ ವಿಧಾನಗಳಿಗೆ ಆದ್ಯತೆ ನೀಡುವ ಮೂಲಕ ಭೌತಿಕವಾಗಿ ಹಣ ಸಂಗ್ರಹಿಸುವುದನ್ನು ತಪ್ಪಿಸಲಾಗುತ್ತದೆ.

ಕನ್ನಡದಲ್ಲಿಯೂ ಅರ್ಜಿ ನಮೂನೆ ಲಭ್ಯ :

ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವ ಎಲ್ಲ ನಮೂನೆಗಳು ಹಾಗೂ ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೂ ಲಭ್ಯಗೊಳಿಸಲಾಗುವುದು. ಅಲ್ಲದೆ, ಅರ್ಜಿಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ನಾಗರಿಕರಿಗೆ ಕಾಲಕಾಲಕ್ಕೆ ಎಸ್‌ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಮಾಹಿತಿ ನೀಡಲಾಗುತ್ತದೆ.

ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು :

ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಧಿಕಾರಿಗಳನ್ನು ಭೇಟಿಯಾಗಲು ಟೋಕನ್ ವ್ಯವಸ್ಥೆ ಜಾರಿಗೆ ತರಲಾಗುವುದು. ವಿಚಾರಣೆಗೆ ಹಾಜರಾಗಬೇಕಾದ ಸಂದರ್ಭಗಳಲ್ಲಿ ಮುಂಚಿತವಾಗಿ ಸಮಯ ನಿಗದಿಪಡಿಸುವ (ಟೈಮ್ ಸ್ಲಾಟ್) ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ.

ಸ್ಥಳ ಪರಿಶೀಲನೆಗಳನ್ನು ಮೊಬೈಲ್ ಆ್ಯಪ್ ಮೂಲಕ ಪಾರದರ್ಶಕವಾಗಿ ನಡೆಸುವಂತೆ ಸೂಚಿಸಲಾಗಿದೆ. ಈ ಮೂಲಕ ಸೇವೆ ಒದಗಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಿ, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆದಾಡುವುದನ್ನು ಹಾಗೂ ಸೇವೆಗಳಲ್ಲಿ ವಿಳಂಬವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸರ್ಕಾರದ ಈ ಹೊಸ ಆದೇಶದಿಂದ ಸಾರ್ವಜನಿಕರಿಗೆ ಲಂಚಗುಳಿತನ, ಕಚೇರಿಗಳಿಗೆ ಅಲೆದಾಟ ಹಾಗೂ ವಿಳಂಬ ನೀತಿಯಿಂದ ಮುಕ್ತಿ ದೊರೆಯಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. ಎಲ್ಲ ಇಲಾಖೆಗಳು ಹೊಸ ಮಾರ್ಗಸೂಚಿಗಳ ಅನುಷ್ಠಾನದ ಕುರಿತು ನಿಯಮಿತವಾಗಿ ಅನುಪಾಲನಾ ವರದಿ ಸಲ್ಲಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor