ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್; ಹೇಳಿಕೊಟ್ಟಂತೆ ವಿಡಿಯೊದಲ್ಲಿ ಮಾತನಾಡಿದ್ದೆ ಎಂದ ಮಹಿಳೆ : ಸಿಸಿಬಿ ತನಿಖೆ ಚುರುಕು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಸ್ಟಿಂಗ್ ವಿಡಿಯೊ ಸೃಷ್ಟಿಸಲಾಗಿದೆ ಎಂಬ ಆರೋಪದ ಕುರಿತು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವಿಡಿಯೊದಲ್ಲಿದ್ದ ಸಂತ್ರಸ್ತೆ ಎಂದು ಬಿಂಬಿಸಲಾದ ಮಹಿಳೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದು, ಕೆಲವರು ಹೇಳಿಕೊಟ್ಟಂತೆ ತಾನು ವಿಡಿಯೊದಲ್ಲಿ ಮಾತನಾಡಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
2023ರಲ್ಲಿ ಒಂದು ತಂಡ ತನ್ನನ್ನು ಭೇಟಿಯಾಗಿ ಹಣ ನೀಡಿ, ಯಾವ ರೀತಿ ಮಾತನಾಡಬೇಕು ಎಂಬುದನ್ನು ಹೇಳಿಕೊಟ್ಟಿತ್ತು. ಅದರಂತೆ ತಾನು ಹೇಳಿಕೆ ನೀಡಿದ್ದೆ. ಅದನ್ನು ಹೊರತುಪಡಿಸಿ, ತನ್ನ ಜೀವಿತಾವಧಿಯಲ್ಲಿ ಈವರೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂಬುದು ತನಗೆ ತಿಳಿದಿತ್ತು ಎಂದು ಮಹಿಳೆ ಹೇಳಿರುವುದಾಗಿ ವರದಿಯಾಗಿದೆ.
ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಸಿದ್ಧತೆ :
ಈಗಾಗಲೇ ಕೇರಳಕ್ಕೆ ತೆರಳಿ ಮಹಿಳೆಯ ಹೇಳಿಕೆ ದಾಖಲಿಸಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.
ಇದಕ್ಕೂ ಮೊದಲು ಮಹಿಳೆಯನ್ನು ಯಾವ ತಂಡ ಸಂಪರ್ಕಿಸಿತ್ತು ಮತ್ತು ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ರಾಕೇಶ್ ಶೆಟ್ಟಿ ಹಾಗೂ ಕೃಪಾ ಆಳ್ವಾ ತಮ್ಮನ್ನು ಭೇಟಿಯಾಗಿದ್ದರೆಂದು ಮಹಿಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನೂ ಮಹಿಳೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.