ಮತ್ತೆ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ | ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ : ತೇಜಸ್ವಿ ಸೂರ್ಯ ಎಚ್ಚರಿಕೆ
"ಫೆಬ್ರವರಿಯಲ್ಲಿ ಮತ್ತೆ ಬಿಎಂಆರ್‌ಸಿಎಲ್ 5% ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ"
ಬೆಂಗಳೂರು : ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿ, ಚೆನ್ನೈ, ಕೊಚ್ಚಿ ಮೆಟ್ರೋಗಳಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಇರುವ ದರವನ್ನು ಬೆಂಗಳೂರಿನ ಮೆಟ್ರೋದೊಂದಿಗೆ ಹೋಲಿಸಿದರೆ ಇಲ್ಲಿ ದರ ದ್ವಿಗುಣವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.
ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರ, ಮುಂಬರುವ ಫೆಬ್ರವರಿಯಲ್ಲಿ ಇದೀಗ ಮತ್ತೆ ಬಿಎಂಆರ್‌ಸಿಎಲ್ 5% ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ. ರಾಜ್ಯ ಸರಕಾರ ಹಾಗೂ ಬಿಎಂಆರ್‌ಸಿಎಲ್ ಜನರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿವೆ. ಇದರ ಜೊತೆಗೆ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ತೀವ್ರವಾಗಿ ವಿಳಂಬವಾಗಿದ್ದು, ಇದಕ್ಕೂ ಬಿಎಂಆರ್‌ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಹಿಂದೆ ದರ ನಿಗದಿ ಸಮಿತಿ ತೀರ್ಮಾನಿಸಿದ್ದ ನಿರ್ಧಾರವೇ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಕಿವಿ ಹಿಂಡುವ ಕೆಲಸ ಮಾಡಿದ್ದೆವು. ಆದರೆ ಬಿಎಂಆರ್‌ಸಿಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪು ನಿರ್ಧಾರವನ್ನು ಸರಿಪಡಿಸಬೇಕು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ – ರಾಜ್ಯ ಸರಕಾರ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರವಾಗಿ ನಿಲ್ಲಬೇಕು. ಮೆಟ್ರೋ ದರ ನಿಗದಿ ಮಾಡುವ ದರ ನಿಗದಿ ಸಮಿತಿ ಪುನರ್ ರಚನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಚಾರದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರುತ್ತದೆ” ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಮತ್ತೆ ಮೆಟ್ರೋ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾದರೆ, ಬಿಜೆಪಿ ವತಿಯಿಂದ ಪ್ರತಿಯೊಂದು ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುತ್ತದೆ. ದರ ಹೆಚ್ಚಿಸಿ ಜನರಿಂದ ದರೋಡೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರ ದರ ಏರಿಕೆ ಮಾಡಿ, ಅದರ ಹೊಣೆಗಾರಿಕೆಯನ್ನು ಕೇಂದ್ರ ಸರಕಾರದ ಮೇಲೆ ತಳ್ಳುವ ಕೆಲಸವನ್ನು ಬಿಡಬೇಕು. ಜನ ವಿರೋಧಿ, ಅವೈಜ್ಞಾನಿಕ ಮೆಟ್ರೋ ದರ ಏರಿಕೆಯನ್ನು ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದಿದ್ದಾರೆ.