×
Ad

ಹುಲಿ ಉಗುರು ಧರಿಸಿದ್ದ ಆರೋಪ: ಅಧಿಕಾರಿಗಳಿಗೆ ಲಾಕೆಟ್ ಒಪ್ಪಿಸಿದ ದರ್ಶನ್, ನಿಖಿಲ್, ಜಗ್ಗೇಶ್

Update: 2023-10-25 23:11 IST

Photo:X

ಬೆಂಗಳೂರು: ಹುಲಿ ಉಗುರನ್ನು ಒಳಗೊಂಡಿರುವ ಲಾಕೆಟ್ ಧರಿಸಿದ ಆರೋಪದ ಮೇಲೆ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.

ಲಾಕೆಟ್‌ಗಳನ್ನು ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಎರಡೂ ಲಾಕೆಟ್‌ ಗಳು ನಕಲು ಪ್ರತಿಕೃತಿಗಳು ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಕೂಡ ಹುಲಿಯ ಉಗುರುಗಳನ್ನು ಒಳಗೊಂಡ ಚಿನ್ನದ ಲಾಕೆಟ್ ಧರಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು, ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರನ್ನೂ ನೀಡಲಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ನಗರದ ಮಲ್ಲೇಶ್ವರದಲ್ಲಿರುವ ನಟ ಜಗ್ಗೇಶ್ ಅವರ ಮನೆಯಲ್ಲಿ ಬುಧವಾರ ವಿಚಾರಣೆ ನಡೆಸಿದೆ.

ಈ ವೇಳೆ ಜಗ್ಗೇಶ್ ಅವರು ಮನೆಯಲ್ಲಿ ಇಲ್ಲದ ಕಾರಣ ಅವರ ಪತ್ನಿ ಪರಿಮಳಾ ಅವರು ಹುಲಿಯ ಉಗುರುಗಳಿರುವ ಚಿನ್ನದ ಲಾಕೆಟ್ ಅನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಡಿಸಿಎಫ್ ರವೀಂದ್ರ ಪ್ರತಿಕ್ರಿಯಿಸಿದ್ದು, 'ಜಗ್ಗೇಶ್ ಅವರ ಪತ್ನಿ ಹುಲಿ ಉಗುರುಗಳಿರುವ ಲಾಕೆಟ್ ಒಪ್ಪಿಸಿದ್ದಾರೆ. ಲಾಕೆಟ್ 40 ವರ್ಷ ಹಳೆಯದು ಎಂದು ಅವರು ಮಾಹಿತಿ ನೀಡಿದ್ದಾರೆ. ಅದರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಡೆಹ್ರಾಡೂನ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಹುಲಿ ಉಗುರು ಎಂದು ಖಚಿತವಾದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಟ ಜಗ್ಗೇಶ್, “ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನಿನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ” ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News