ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಮುನ್ನವೇ ಮಧ್ಯವರ್ತಿಗಳಿಗೆ ಮಾಹಿತಿ ಸೋರಿಕೆ ಆರೋಪ: ಇಬ್ಬರು ಕೆಪಿಎಸ್ಸಿ ನೌಕರರ ಬಂಧನ
ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 2025ರಲ್ಲಿ ಜಲಸಂಪನ್ಮೂಲ ಇಲಾಖೆಯ ಕಿರಿಯ ಇಂಜಿನಿಯರ್ (ಸಿವಿಲ್ ಮತ್ತು ಮೆಕ್ಯಾನಿಕ್) ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಕ್ಕೂ ಮುನ್ನವೇ ಮಧ್ಯವರ್ತಿಗಳಿಗೆ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿ ಲೋಪವೆಸಗಿದ್ದ ಆರೋಪದಡಿ ಇಬ್ಬರು ಸರಕಾರಿ ನೌಕರರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ಶೋಭಾ ಬಿ.ಎನ್ ಅವರು ಜನವರಿಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ನಾಲ್ವರು ಮಧ್ಯವರ್ತಿಗಳನ್ನು ಬಂಧಿಸಲಾಗಿತ್ತು. ಸದ್ಯ, ಇದೇ ದಲ್ಲಾಳಿಗಳಿಗೆ ಮಾಹಿತಿ ನೀಡಿದ ಆರೋಪದಡಿ ಕೆಪಿಎಸ್ಸಿ ತಾಂತ್ರಿಕ ಸಹಾಯಕ ಶರಣಪ್ಪ ಅಡವಳ್ಳಿ, ಹಿರಿಯ ಸಹಾಯಕ ಸ್ವಾಮಿದಾಸ್ ಎಂಬುವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ಕಿರಿಯ ಇಂಜಿನಿಯರ್ ಹುದ್ದೆಗಳ ಲಿಖಿತ ಪರೀಕ್ಷೆಯು 2025ರ ಮಾ.16ರಂದು ನಡೆದಿತ್ತು. ಈ ವರ್ಷ ಜ.28ರಂದು 1:3ರ ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾಪಟ್ಟಿ ಪ್ರಕಟ ಕುರಿತಂತೆ ದಿನಾಂಕ ನಿಗದಿಪಡಿಸಲಾಗಿತ್ತು.
ಇನ್ನು, ಈ ಪ್ರಕರಣದ ತನಿಖೆ ವೇಳೆ ಇಬ್ಬರು ಸರಕಾರಿ ನೌಕರರು ಕರ್ತವ್ಯಲೋಪವೆಸಗಿರುವುದು ದೃಢವಾದ ಹಿನ್ನೆಲೆಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಾಕೆ ತಿಳಿಸಿದ್ದಾರೆ.
ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಮುನ್ನವೇ ಯಾವ ಅಭ್ಯರ್ಥಿಗಳು ಸಂಭಾವ್ಯ ಆಯ್ಕೆಪಟ್ಟಿಯಲ್ಲಿದ್ದಾರೆ. ಅಭ್ಯರ್ಥಿಗಳ ಕ್ರಮ ಸಂಖ್ಯೆ ಸೇರಿದಂತೆ ಇನ್ನಿತರ ಗುಪ್ತ ಮಾಹಿತಿಗಳನ್ನು ಆರೋಪಿಗಳು ದಲ್ಲಾಳಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಮಾಹಿತಿ ಆಧರಿಸಿ ಅಭ್ಯರ್ಥಿಗಳಿಗೆ ಕರೆ ಮಾಡಿ ಉದ್ಯೋಗ ಕೊಡಿಸುವ ಆಮಿಷವೊಡ್ಡುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.