×
Ad

ಬಿಟ್‍ಕಾಯಿನ್ ಹಗರಣ ಪ್ರಕರಣ: ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ನಲಪಾಡ್‍ಗೆ ಈ.ಡಿ. ಸಮನ್ಸ್

Update: 2026-05-31 19:10 IST

ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಬಿಟ್‍ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಮುಖಂಡ, ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್‍ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಈ.ಡಿ.) ಸಮನ್ಸ್ ನೀಡಿದ್ದು, ನಾಳೆ(ಜೂ.1) ವಿಚಾರಣೆ ಹಾಜರಾಗುವಂತೆ ಸೂಚಿಸಿದೆ.

ನಲಪಾಡ್ ವಿಚಾರಣೆಗೆ ಹಾಜರಾಗುವಂತೆ ಹಿಂದಿನ ಶುಕ್ರವಾರವೇ(ಮೇ29) ಈ.ಡಿ. ಸಮನ್ಸ್ ಜಾರಿಗೊಳಿಸಿತ್ತು. ಆದರೆ, ರಾಜಕೀಯ ಕಾರ್ಯಕ್ರಮ ಹಿನ್ನೆಲೆ ಮೊದಲ ನೋಟಿಸ್‍ಗೆ ನಲಪಾಡ್ ಹಾಜರಾಗಿರಲಿಲ್ಲ. ಕಾರಣ ತಿಳಿಸಿ ಈ.ಡಿ.ಗೆ ಮನವಿ ಮಾಡಿದ್ದರು. ಇದೀಗ ಎರಡನೇ ಬಾರಿ ಈ.ಡಿ. ನೋಟಿಸ್ ಜಾರಿ ಮಾಡಿದ್ದು ಸೋಮವಾರ(ಜೂ.1) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ತನಿಖೆಯನ್ನು ತೀವ್ರಗೊಳಿಸಿದೆ.

ಇತ್ತೀಚೆಗಷ್ಟೇ ಬಿಟ್ ಕಾಯಿನ್ ಬಹುಕೋಟಿ ಹಗರಣ ಪ್ರಕರಣದಲ್ಲಿ ಬೆಂಗಳೂರಿನ ಅಶೋಕನಗರದಲ್ಲಿರುವ ನಲಪಾಡ್ ಮನೆ ಹಾಗೂ ಶ್ರೀಕಿ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆಗಳ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಹಾರ್ಡ್‍ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಈ.ಡಿ. ಅಧಿಕಾರಿಗಳು ಶ್ರೀಕಿ, ಸುನೇಶ್ ಹೆಗ್ಡೆ, ರಾಬಿನ್ ಖಂಡೇವಾಲ ಅವರನ್ನು ಬಂಧಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಶ್ರೀಕೃಷ್ಣ ಯಾನೆ ಶ್ರೀಕಿ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News