×
Ad

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು

Update: 2026-05-31 19:19 IST

ಡಿ.ಕೆ.ಶಿವಕುಮಾರ್‌(PTI)

ಬೆಂಗಳೂರು : ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಲುವಾಗಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳ ದೊಡ್ಡ ದಂಡೇ ಹರಿದುಬಂದಿತ್ತು.

ಡಿ.ಕೆ.ಶಿವಕುಮಾರ್ ಅವರು ಜೂನ್ 3ರ ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಅಂದೇ ಹಲವು ಶಾಸಕರು ಸಂಪುಟ ಸೇರಲಿದ್ದಾರೆ. ಹೀಗಾಗಿ, ಮಾಜಿ ಸಚಿವರು, ಶಾಸಕರು ಶಿವಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಆಗಮಿಸಿ ಶುಭ ಕೋರಿದಲ್ಲದೆ, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದರು.

ರವಿವಾರ ಬೆಳಗ್ಗೆ ಮಾಜಿ ಸಚಿವರಾದ ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಸಂತೋಷ್‌ ಲಾಡ್, ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಶಾಸಕರಾದ ಅಶೋಕ್ ಪಟ್ಟಣ್, ಮಂಕಾಳ ವೈದ್ಯ, ರೂಪಾ ಶಶಿಧರ್, ತನ್ವೀರ್ ಸೇಠ್, ವಿಜಯಾನಂದ ಕಾಶೆಪ್ಪನವರ್ ಸೇರಿ ಹಲವರು ಶಿವಕುಮಾರ್ ಅವರನ್ನು ಭೇಟಿಯಾಗಿ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪುಷ್ಪಾಗುಚ್ಚವನ್ನು ಅಭಿನಂದಿಸಿದರು.

ಸಚಿವಾಕಾಂಕ್ಷಿ ಶಾಸಕ ಆಶೋಕ್ ಪಟ್ಟಣ್ ಈ ಕುರಿತು ಪ್ರತಿಕ್ರಿಯಿಸಿ, ‘ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲಿದ್ದಾರೆ. ನಾವೆಲ್ಲಾ ಒಳ್ಳೆಯ ಸ್ನೇಹಿತರು, ಸಚಿವ ಸಂಪುಟದಲ್ಲಿ ನನಗೆ ಸ್ಥಾನ ದೊರೆಯಲಿದೆ ಎನ್ನುವ ವಿಶ್ವಾಸ ಇದೆ’ ಎಂದು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ‘ಈ ಬಾರಿಯ ಸಂಪುಟ ರಚನೆಯಲ್ಲಿ ಮೊದಲ, ಎರಡನೆ ಬಾರಿ ಗೆದ್ದ ಐವರಿಗೆ ಅವಕಾಶ ಕೊಡಬೇಕು. ಮೊದಲ ಬಾರಿಗೆ ಗೆದ್ದವರಿಗೆ ಅವಕಾಶ ಮಾಡಿ. ಯುವಕರಿಗೂ ಆದ್ಯತೆ ಕೊಟ್ಟಂತಾಗುತ್ತೆ. ನಮ್ಮ ತಂದೆ ಧ್ರುವನಾರಾಯಣ್ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕಾಗಿ ಜೀವ ಅರ್ಪಣೆ ಮಾಡಿದ್ದಾರೆ. ಅವರಿದ್ದರೆ ಸಚಿವ ಸ್ಥಾನಕ್ಕೆ ಅರ್ಹವಾದ ವ್ಯಕ್ತಿ. ಇದನ್ನು ಶಿವಕುಮಾರ್ ಅವರೇ ಸದನದೊಳಗೆ ಹೇಳಿದ್ದಾರೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡಬೇಕೆಂದು ಕೋರಿದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಚಿವ ಸಂಪುಟದಲ್ಲಿ ಸೇರಲು ಯಾರಿಗೆ ಭರವಸೆ ಇರಲ್ಲ. ಆದರೆ, ನನಗೆ ಭರವಸೆ ಇದೆ ಎಂದು ನುಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News