'ವಿಶೇಷ ತೀವ್ರ ಪರಿಷ್ಕರಣೆ'ಯಲ್ಲ, ಇದು 'ವಿಕಾರ ತೀವ್ರ ಪರಿಷ್ಕರಣೆ' : ದೇವನೂರ ಮಹಾದೇವ
"ಜ್ಞಾನೇಶ್ ಕುಮಾರ್ ಅವರ ಹುದ್ದೆ ಒಂದು ರೀತಿ ಅಕ್ರಮ ಶಿಶು"
ದೇವನೂರು ಮಹಾದೇವ
ಬೆಂಗಳೂರು : ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ಒಂದು ವ್ಯವಸ್ಥಿತ ಹುನ್ನಾರವಾಗಿದ್ದು, ಇದು 'ವಿಶೇಷ ಪರಿಷ್ಕರಣೆ'ಯಲ್ಲ, ಬದಲಿಗೆ 'ವಿಕಾರ ತೀವ್ರ ಪರಿಷ್ಕರಣೆ' ಎಂದು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ದೇವನೂರ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿರುವ ಅವರು, ʼಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಒಟ್ಟಿಗೆ ಸೇರಿ ಆಯ್ಕೆ ಮಾಡುವ ಒಂದು ಸಕ್ರಮವಾದ ಆಯ್ಕೆ ಪದ್ಧತಿ ಹಿಂದೆ ಇತ್ತು. ಇದರಲ್ಲಿ ಒಂದು ನ್ಯಾಯಪರತೆ ಕೂಡ ಇತ್ತು. ಆದರೆ ನಮ್ಮ ಸಂಸತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ಹಾಗೂ ಪ್ರಧಾನಿ ಹೆಸರಿಸಿದ ಒಬ್ಬರು ಹಾಗೂ ವಿರೋಧ ಪಕ್ಷದ ನಾಯಕ ಎಂದು ತಿದ್ದುಪಡಿ ಮಾಡಿತು. ಇದರ ಫಲವೇ ಜ್ಞಾನೇಶ್ ಅವರ ಆಯ್ಕೆಗೆ ಕಾರಣ. ನಮ್ಮ ಈ ಜ್ಞಾನಗೆಟ್ಟ ಸಂಸತ್ತಿನ ನಡೆಯಿಂದಾಗಿ ಜ್ಞಾನೇಶ್ ಕುಮಾರ್ ಅನ್ವರ್ಥನಾಮ ʼಜ್ಞಾನಗೆಟ್ಟ ಜ್ಞಾನೇಶ್ ಕುಮಾರ್ʼ ಅವರು ಆಯ್ಕೆ ಆಗುವಂತೆ ಆಯಿತು. ಇವರ ಹುದ್ದೆ ಒಂದು ರೀತಿ ಅಕ್ರಮ ಶಿಶು. ಇವರಿಗೆ ಇಬ್ಬರು ಅಪ್ಪಂದಿರು, ಒಬ್ಬರು ಇವರನ್ನು ಆಯ್ಕೆ ಮಾಡಿದ ಮೋದಿಯವರು. ಮತ್ತೊಬ್ಬರು ಅಮಿತ್ ಶಾ ಅವರು. ಇನ್ನೊಬ್ಬರು ಪ್ರೇಕ್ಷಕ, ಅದು ವಿರೋಧ ಪಕ್ಷದ ನಾಯಕʼ ಎಂದು ದೇವನೂರ ಮಹಾದೇವ ಹೇಳಿದ್ದಾರೆ.
ಆಡಳಿತ ನಡೆಸುವ ಪಕ್ಷದಿಂದ ಇಬ್ಬರಿಗೆ ಆಯ್ಕೆಯ ಸ್ವಾತಂತ್ರ್ಯ ಇದೆ. ಈಗ ಅಪ್ಪಂದಿರ ಇಚ್ಛೆಯನ್ನು ಮಗ ಗೌರವಿಸುತ್ತಿದ್ದಾರೆ. ಅದುವೇ ಇಂದು ತಲ್ಲಣಗೊಳಿಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ದೇಶದಲ್ಲಿ ವಿದೇಶಿ ನುಸುಳುಕೋರರು ಇದ್ದಾರೆ ಎಂದು ಮುಖ್ಯವಾಗಿ ಪ್ರಚಾರ ಮಾಡಿದರು. ಭಾರತದಲ್ಲಿ, ಅವರನ್ನು ಹೊರಹಾಕುವುದಕ್ಕಾಗಿ ಪರಿಷ್ಕರಣೆ ವಿಶೇಷವಾಗಿ ಮಾಡ್ತೀವಿ ಎಂದು ಹೇಳಿದರು. ಈ ವಿಶೇಷ ಪರಿಷ್ಕರಣೆ ಈಗಾಗಲೇ 13 ರಾಜ್ಯ ಹಾಗೂ ಮೂರು ಕೇಂದ್ರಾಳಿತ ಪ್ರದೇಶಗಳಲ್ಲಿ ಜರುಗಿದೆ. ಈಗಾಗಲೇ ಎರಡನೇ ಹಂತದ ಪರಿಷ್ಕರಣೆ ಮುಗಿದು ಹೋಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಷ್ಟು ಜನ ವಿದೇಶಿ ಪ್ರಜೆಗಳಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ಪ್ರಶ್ನೆ ಮಾಡುತ್ತೆ. ಆದರೆ ಅವರ ಉತ್ತರ ಮೌನ. ಇದರ ಅರ್ಥ ಏನು?. ಇದೇ ರೀತಿ ಬಿಹಾರದಲ್ಲಿ ಎಷ್ಟು ಜನ ವಿದೇಶಿ ನುಸುಳುಕೋರರು ಸಿಕ್ಕಿದ್ದಾರೆ ಅಂದರೆ ಆಯೋಗದ ಉತ್ತರ 200 ಅಂತ, ಇದರಲ್ಲಿ 194 ಜನ ಬಿಹಾರಕ್ಕೆ ಮದುವೆಯಾಗಿ ಬಂದ ನೇಪಾಳಿ ಮಹಿಳೆಯರು ಸೇರಿದ್ದಾರೆ. ಬಹಳ ಹಿಂದಿನಿಂದಲೂ ಕೂಡ ಬಿಹಾರ ಮತ್ತು ನೇಪಾಳದ ನಡುವೆ ಮದುವೆ ಸಂಬಂಧ ನಡೆದುಕೊಂಡು ಬಂದಿದೆ. ನಮ್ಮ ಸೊಸೆಯಂದಿರನ್ನೇ ಚುನಾವಣಾ ಆಯೋಗ ನುಸುಳುಕೋರರು ಎಂದು ಪರಿಗಣಿಸಿಬಿಟ್ಟಿದೆ. ಇನ್ನುಳಿದವರು ಆರು ಜನರು ಬಾಂಗ್ಲಾ ಮುಸ್ಲಿಮರು ಎಂದು ಹೇಳಿದ್ದಾರೆ. ಆದರೆ, ಈ ಆರೇಳು ಜನ ವಿದೇಶಿಯರನ್ನು ಗುರುತಿಸಬೇಕಾದವರು ಗುಪ್ತಚರ ಇಲಾಖೆಯವರು ಅಲ್ಲವೇ? ಇದು ಚುನಾವಣಾ ಆಯೋಗದ ಕೆಲಸವೇ? ಇದಕ್ಕೆ ಎಷ್ಟು ಮತದಾರರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಎಲ್ಲಾ ಮತದಾರರನ್ನು ವಿಶೇಷವಾಗಿ ತೀವ್ರವಾಗಿ ಪರಿಷ್ಕರಣೆ ಮಾಡುವುದರಲ್ಲಿನ ಹುನ್ನರ ಏನು? ಎಸ್ಐಆರ್ ನೋಟಿಫಿಕೇಶನ್ ನಲ್ಲಿ ಒಂದು ಸೂಚನೆ ಇದೆ. ಮ್ಯಾಪಿಂಗ್ ದತ್ತಾಂಶಗಳನ್ನು ಯಾರಿಗೂ ನೀಡಬಾರದು, ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂದು, ಇದು ಯಾಕೆ? ಇದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ 13 ರಾಜ್ಯ ಹಾಗೂ ಮೂರು ಕೇಂದ್ರ ಆಡಳಿತ ಪ್ರದೇಶದಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಐದಾರು ಕೋಟಿ ಮತದಾರರನ್ನು ಹೊರಗಿಡಲಾಗಿದೆ. ಇದರಲ್ಲಿ ಶೇ.66.6 ಆರು ಮಹಿಳೆಯರೇ ಸೇರಿದ್ದಾರೆ. ಮದುವೆಯಾಗಿ ಗಂಡನ ಮನೆಗೆ ಹೋಗುವುದರಿಂದ ಅವರನ್ನು ಹೊರಗಿಡಲಾಗಿದೆ. ಅಂದರೆ ಅವರು ಮದುವೆಯೇ ಆಗಬಾರದಾ?. ಇನ್ನು ಉಳಿದವರು ಸಾಮಾನ್ಯವಾಗಿ ಹೆಚ್ಚಾಗಿ ಹಳ್ಳಿಗರು, ದಲಿತರು, ತಳ ಸಮುದಾಯದವರು, ವಲಸೆ ಕಾರ್ಮಿಕರು ಹೆಚ್ಚಾಗಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರ ಕಡೆಗೆ ಇವರು ಅನುಮಾನದಿಂದ ದ್ವೇಷದಿಂದ, ಸೇಡಿನಿಂದ ದುರ್ಬೀನ್ ಹಾಕಿಕೊಂಡು ನೋಡ್ತಾ ಇದ್ದಾರೆ. ಇದು ನಮ್ಮ ಪರಿಸ್ಥಿತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ವಿಶೇಷ ತೀವ್ರ ಪರಿಷ್ಕರಣೆ ಅಲ್ಲ, ಬದಲಿಗೆ ವಿಕಾರ ತೀವ್ರ ಪರಿಷ್ಕರಣೆ. ಮತದಾರರು ಫಾರಂ ಭರ್ತಿ ಮಾಡಬೇಕು ಎಂದು ಕೇಳಿದ್ದಾರೆ. ಇದು ಭಾರತದಲ್ಲಿ ಕಷ್ಟದ ಸಮಸ್ಯೆ ಅಲ್ಲವೇ?. 2025ರ ಮತದಾರ ಪಟ್ಟಿ ಜೊತೆಗೆ 2002ರ ಮತದಾರ ಪಟ್ಟಿಗೆ ಎರಡು ಕೂಡ ಹೋಲಿಕೆ ಮಾಡುತ್ತಾರೆ. ಈ ಎರಡರ ನಡುವೆ ತಾಳೆ ನೋಡುವಾಗ ಮತದಾರನ ಹೆಸರಿನ ಕಾಗುಣಿತ, ತಂದೆ ಹೆಸರಿನ ಕಾಗುಣಿತ ಒಂದೇ ಇರಬೇಕು ಎಂದು ಹೇಳಿದ್ದಾರೆ, ಇದು ಕಷ್ಟ ಅಲ್ವಾ?. ನನ್ನದೇ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನನ್ನನ್ನು ಕೆಲವರು ದೇವನೂರು ಮಹಾದೇವ ಅಂತಾರೆ, ದೇವನೂರ ಮಹಾದೇವ ಅಂತಾರೆ, ದೇವನೂರು ಮಹಾದೇವು ಅಂತನೂ ಅಂತಾರೆ. ಭಾರತದ ಸ್ವದೇಶಿ ಭಾಷೆಗಳಲ್ಲಿ ಉಚ್ಚಾರಣೆ ನಾವು ಹೇಗೆ ಮಾಡುತ್ತೀವೋ ಆ ರೀತಿ ಅಕ್ಷರ ಬರೆಯುತ್ತೇವೆ. ಒಂದೊಂದು ಸಲ ಉಚ್ಚಾರಣೆ ಬಂದಾಗಲೇ ಅಕ್ಷರಗಳು ಬಲಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಪ್ರಕ್ರಿಯೆಯಿಂದ ಏನಾಗುತ್ತಿದೆ ಎಂದರೆ ʼಮತದಾರ ಎಂಬ ಇಟ್ಟಿಗೆʼಯಿಂದ ಕಟ್ಟಿದ ಪ್ರಜಾಪ್ರಭುತ್ವ ಸೌಧದ ಒಂದೊಂದೇ ಇಟ್ಟಿಗೆ ತೆಗೆದು ಪ್ರಜಾಪ್ರಭುತ್ವ ಕುಸಿಯುವ ರೀತಿ ಮಾಡ್ತಾ ಇದ್ದಾರೆ. ಇದು ಎಲ್ಲಕ್ಕಿಂತ ದೊಡ್ಡ ಅಪಾಯ. ಪಂಚಾಯಿತಿ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಆಗಬೇಕು. ಗ್ರಾಮ ಪಂಚಾಯತಿ ಸದಸ್ಯ ಇರಲಿ ಅಥವಾ ಲೋಕಸಭಾ ಸದಸ್ಯ ಇರಲಿ, ಅವರೆಲ್ಲರೂ ಅಳಿವು ಉಳಿವಿನ ಪ್ರಶ್ನೆ ಎಂದು ಇಲ್ಲಿ ಕೆಲಸ ಮಾಡಬೇಕು. ಯಾವ ಮತದಾರರು ಬಿಟ್ಟು ಹೋಗದ ರೀತಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಈ ಮಧ್ಯೆ ಒಂದು ತಿಂಗಳೊಳಗೆ ಎಸ್ ಐ ಆರ್ ಮುಗಿಸಿಬಿಡಬೇಕು ಎಂದು ಒತ್ತಡ ಹೇರಿದ್ದಾರೆ. ಒಂದು ರೀತಿ ಉಸಿರುಗಟ್ಟಿದ ವಾತಾವರಣ ಇದು, ಇಂತಹ ವಾತಾವರಣ ಸೃಷ್ಟಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ಇದು ಯಾಕೆ?. ತೀವ್ರ ಪರಿಷ್ಕರಣೆ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಜಾಗೃತ ಕರ್ನಾಟಕವು ಬಿಜೆಪಿ ಮತ್ತು ಚುನಾವಣಾ ಆಯೋಗಕ್ಕೆ ಆಫರ್ ನೀಡಿದೆ. ಅವರು ಬರ್ತಾರೋ ಇಲ್ವೋ ಗ್ಯಾರೆಂಟಿ ಇಲ್ಲ. ಆದರೂ ಕೂಡ ಜಾಗೃತ ಕರ್ನಾಟಕ ಈ ಚರ್ಚೆಯನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.