ಬಿಜೆಪಿಯಲ್ಲಿ ಸಂಚಲನ | ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಲು ಪ್ಲ್ಯಾನ್? : ಡಿ.ವಿ.ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್
ಡಿ.ವಿ.ಸದಾನಂದ ಗೌಡ/ವಿಜಯೇಂದ್ರ
ಬೆಂಗಳೂರು : ‘ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ’ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರು, ಅನಾಮಧೇಯ ವ್ಯಕ್ತಿಯೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾಗಿರುವ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಬಿಜೆಪಿಯ ಕೇಂದ್ರದ ಪ್ರಮುಖ ವ್ಯಕ್ತಿಯೊಬ್ಬರ ಜೊತೆ ಸುಮಾರು ಮೂರು ನಿಮಿಷಗಳ ಕಾಲ ದೂರವಾಣಿ ಮೂಲಕ ಡಿ.ವಿ.ಸದಾನಂದಗೌಡ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೂ ಕಾರಣವಾಗಿದೆ. ಅಲ್ಲದೆ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಕ್ಷದ ಮುಖಂಡರಿಂದಲೇ ಒತ್ತಡ ಹೇರಲಾಗುತ್ತಿದೆ ಎಂಬ ಅಂಶವು ಬಯಲಾಗಿದೆ.
‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕಿತ್ತು ಹಾಕಬೇಕು. 2026ರ ಅಕ್ಟೋಬರ್ ವೇಳೆಗೆ ಹೇಗಿದ್ದರೂ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಮುಕ್ತಾಯವಾಗಲಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಿದರೆ ಪಕ್ಷದಲ್ಲಿನ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಲಿವೆ. ಹೀಗಾಗಿ ಹೈಕಮಾಂಡ್ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.
‘ಮಧ್ಯದಲ್ಲೇ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಿದರೆ ನಾವು ಲಿಂಗಾಯಿತರ ವಿರೋಧಿ ಎಂದು ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಜುಲೈ, ಆಗಸ್ಟ್, ಸೆಪ್ಟಂಬರ್ ವರೆಗೆ ಕಾದರೆ ಅಕ್ಟೋಬರ್ ವೇಳೆ ಹೇಗಿದ್ದರೂ ಅವರ ಅಧಿಕಾರದ ಅವಧಿ ಮುಗಿಯುತ್ತದೆ. ಆಗ ಅವರನ್ನು ಕಿತ್ತು ಹಾಕಿಬಿಡಿ, ಹೀಗಾದರೆ ಯಾವ ಗೊಂದಲವೂ ಇರುವುದಿಲ್ಲ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
‘ನಾನು ಹೇಳಿ-ಕೇಳಿ ದೇವರನ್ನು ನಂಬುವ ವ್ಯಕ್ತಿ. ಈಗಲೂ ನಾನು ಹೋದರೆ ಬಸ್, ಆಟೋರಿಕ್ಷಾ ನಿಲ್ದಾಣಗಳಿಗೆ ಹೋದರೆ 40ರಿಂದ 50 ಸಾವಿರ ಮಂದಿ ಸೇರುತ್ತಾರೆ. ನಾನು ಈ ಹಿಂದೆಯೂ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಆಗ ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದೆ. ಇದೀಗ ಎಲ್ಲವೂ ವಿರುದ್ಧವಾಗಿ ನಡೆಯುತ್ತಿವೆ’ ಎಂದು ಅನಾಮಧ್ಯೇಯ ವ್ಯಕ್ತಿಯೊಂದಿಗೆ ಆಂಗ್ಲಭಾಷೆಯಲ್ಲಿ ಸಂಭಾಷಣೆ ಮಾಡಲಾಗಿದೆ.
‘ಸಾಮಾಕ ಜಾಲತಣದಲ್ಲಿ ವೈರಲ್ ಆಗಿರುವ ಆಡಿಯೋ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹೀಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಕುರಿತು ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ-ರಾಜ್ಯದ ನಾಯಕರು ಪ್ರಶ್ನಿಸಿದರೆ ನಾನು ಉತ್ತರ ಕೊಡುತ್ತೇನೆ’
-ಡಿ.ವಿ.ಸದಾನಂದಗೌಡ ಮಾಜಿ ಮುಖ್ಯಮಂತ್ರಿ