×
Ad

ತಮಿಳುನಾಡು ಕೇಳಿದಷ್ಟು ಬಿಡಲು ನಮ್ಮ ಬಳಿ ನೀರಿಲ್ಲ, ಬಿಡುವುದೂ ಇಲ್ಲ: ಡಿ.ಕೆ.ಶಿವಕುಮಾರ್

Update: 2023-09-26 15:30 IST

Photo: twitter.com/DKShivakumar

ಬೆಂಗಳೂರು: "ತಮಿಳುನಾಡು ಕೇಳಿದಷ್ಟು ನೀರನ್ನು ನಾವು ಬಿಡಲು ಆಗುವುದಿಲ್ಲ, ನಾವು ಬಿಡುವುದೂ ಇಲ್ಲ. ನಮ್ಮ ಬಳಿ ಅಷ್ಟು ನೀರಿಲ್ಲ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಮಾಧ್ಯಮದವರ ಬಳಿ ಪ್ರತಿಕ್ರಿಯೆ ನೀಡಿದ ಅವರು, “ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆಯುತ್ತಿದ್ದು, ತಮಿಳುನಾಡಿನವರು 12,500 ಕ್ಯೂಸೆಕ್ಸ್ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲೂ ಆಗದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ಪ್ರತಿದಿನ ಎಷ್ಟು ನೀರು ಬರುತ್ತಿದೆ ಮತ್ತು ಹೊರ ಹೋಗುತ್ತಿದೆ ಎನ್ನುವ ಮಾಹಿತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಬಿಳಿಗುಂಡ್ಲು ಜಲಾಶಯದಲ್ಲಿ ಪ್ರತಿಕ್ಷಣವೂ ಅದು ದಾಖಲಾಗುತ್ತದೆ. ಇದನ್ನು ಎರಡೂ ರಾಜ್ಯಗಳ ಅಧಿಕಾರಿಗಳು ಗಮನಿಸುತ್ತಿರುತ್ತಾರೆ. ಅದರ ಮೇಲ್ವಿಚಾರಣೆ ರಾಜ್ಯದ ಬಳಿ ಇಲ್ಲ. ಕಾವೇರಿ ನೀರು ನಿರ್ವಹಣಾ ಸಮಿತಿಯ ಬಳಿ ಇದೆ. ಆದ ಕಾರಣ ನೀರಿನ ಹರಿವಿನ ವಿಚಾರದಲ್ಲಿ ನಾನಾಗಲಿ, ಅವರಾಗಲಿ ಸುಳ್ಳು ಹೇಳಲು ಸಾಧ್ಯವಿಲ್ಲ. ನಾವು ಸುಳ್ಳು ಹೇಳಿದರೆ ನಮ್ಮ ಮುಂದೆ ವಾಸ್ತಾವಾಂಶ ಇಡುತ್ತಾರೆ. ತಾಂತ್ರಿಕ ವಿಚಾರಗಳು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೀಡುತ್ತಾರೆ. ನಾವು ಹೇಳಿದರೆ ಕೇಳುವುದಿಲ್ಲ. ಬೆಂಗಳೂರು ಸೇರಿದಂತೆ ಸುತ್ತಾಮುತ್ತಾ ಮಳೆ ಬಿದ್ದ ಪರಿಣಾಮ ಸ್ವಲ್ಪ ನೀರಿನ ಮಟ್ಟ ಹೆಚ್ಚಾಗಿದೆ ಎಂದರು.

ರಾಜ್ಯದಲ್ಲಿ ಕನ್ನಡಿಗರ ಸರ್ಕಾರವಿಲ್ಲ, ಸ್ಟಾಲಿನ್ ಸರ್ಕಾರವಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು “ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಕುಮಾರಸ್ವಾಮಿ ಅವರ ತಂದೆ ದೇವೇಗೌಡರು ಏನು ಹೇಳಿದ್ದರು, ಈಗ ಏನು ಪತ್ರ ಬರೆದಿದ್ದಾರೆ ಎಂದು ಗೊತ್ತಿದೆಯೇ ಅವರಿಗೆ? ನೀರಿನ ವಿಚಾರದಲ್ಲಿ ರಾಜಕಾರಣ ಬಿಟ್ಟು ರಾಜ್ಯದ ಹಿತ ಕಾಪಾಡಲಿ” ಎಂದರು.

ಇಂದು ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆಯಿದ್ದು ರಾಜ್ಯದ ಅಧಿಕಾರಿಗಳು ವಾಸ್ತವಾಂಶವನ್ನು ಸಮಿತಿಯ ಮುಂದಿಡಲಿದ್ದಾರೆ. ರಾಜ್ಯದ ಹಿತವೇ ನಮ್ಮ ಮೊದಲ ಆದ್ಯತೆ, ಇಂದು ಅಥವಾ ನಾಳೆ ನಾನು ಮತ್ತು ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News